ಮಾಸ್ಕೊ : ಭಾರತದ ಚೆಸ್ ಆಟಗಾರ್ತಿ ಕೊನೆರು ಹಂಪಿ 2019ರ ಮಹಿಳೆಯರ ವಿಶ್ವ ರ್ಯಾಪಿಡ್ ಚೆಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಭಾರತ ಕಂಡ ಶ್ರೇಷ್ಠ ಮಹಿಳಾ ಚೆಸ್ ಆಟಗಾರ್ತಿಯಾಗಿರುವ ಕೊನೆರು ಹಂಪಿ ಚೀನಾದ ಲೀ ಯಿಂಗ್ಜಿ ಅವರನ್ನು ಮಣಿಸುವ ಮೂಲಕ ವಿಶ್ವ ರ್ಯಾಪಿಡ್ ಚೆಸ್ ಚಾಂಪಿಯನ್ಶಿಪ್ ಕಿರೀಟವನ್ನು ಧರಿಸಿದ್ದಾರೆ.
ಮೊದಲ ಗೇಮ್ನಲ್ಲಿ ಸೋಲನುಭವಿಸಿ ಹಂಪಿ ಎರಡನೇ ಗೇಮ್ ಗೆದ್ದು ಚೀನಾ ಆಟಗಾರ್ತಿಗೆ ತಿರುಗೇಟು ನೀಡಿದರು. ಮೂರನೇ ಗೇಮ್ನಲ್ಲಿ ಉತ್ತಮ ನಡೆಗಳೊಂದಿಗೆ ಆರಂಭದಲ್ಲೇ ಮುನ್ನಡೆ ಕಾಯ್ದುಕೊಂಡ ಅವರು ಸುಲಭ ಜಯ ಸಾಧಿಸುವ ಮೂಲಕ ಚಾಂಪಿಯನ್ ಆಗಿ ಹೊರ ಹೊಮ್ಮಿದರು.
"ನಾನು ಈ ಟೂರ್ನಿಗೆ ಹೆಚ್ಚು ತಯಾರಿ ನಡೆಸಿರಲಿಲ್ಲವಾದ್ದರಿಂದ ಅಗ್ರ 3 ರಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂದು ಕೊಂಡಿದ್ದೆ. ಆದರೆ ಪ್ರಶಸ್ತಿ ಜಯಿಸಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ" ಎಂದು ಹಂಪಿ ಅಂತಾರಾಷ್ಟ್ರೀಯ ಚೆಸ್ ಫೆಡರೇಷನ್ ವೆಬ್ಸೈಟ್ಗೆ ನೀಡಿದ ಸಂದರ್ಶನದಲ್ಲಿ ಸಂತಸ ಹಂಚಿಕೊಂಡಿದ್ದಾರೆ.
ಇನ್ನು ಪುರುಷರ ವಿಭಾಗದಲ್ಲಿ ನಾರ್ವೆಯ ಮ್ಯಾಗ್ನಸ್ ಕಾರ್ಲ್ಸೆನ್ ಅಮೇರಿಕಾದ ಅರೋನಿಯನ್ ರನ್ನು ಮಣಿಸಿ ವಿಶ್ವ ರ್ಯಾಪಿಡ್ ಚೆಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಅವರು ಈ ಟೂರ್ನಿಯಲ್ಲಿ 8 ಗೆಲುವು ಹಾಗೂ 7 ಡ್ರಾ ಸಾಧಿಸುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.