ಉಲಾನ್‌ಬಾತರ್(ಮಂಗೋಲಿಯಾ): ಕನ್ನಡಿಗ ಅರ್ಜುನ್ ಹಲಕುರ್ಕಿ ಸೇರಿ ಭಾರತದ ಮೂವರು ಕುಸ್ತಿಪಟುಗಳು ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನ ಗ್ರೀಕೊ ರೋಮನ್ ವಿಭಾಗದಲ್ಲಿ ಮಂಗಳವಾರ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇಂದು 5 ಕುಸ್ತಿಪಟುಗಳು ಸ್ಪರ್ಧೆಗಿಳಿದಿದ್ದು ಅರ್ಜುನ್, ಸುನಿಲ್ ಹಾಗೂ ನೀರಜ್ ಕಂಚಿನ ಪದಕಕ್ಕೆ ಮುತ್ತಿಕ್ಕಿದರು.
55 ಕೆಜಿ ವಿಭಾಗದಲ್ಲಿ ಅಕಾಡಕ್ಕಿಳಿದಿದ್ದ ಅರ್ಜುನ್, ಕಂಚಿನ ಪದಕದ ಪ್ಲೇ ಆಫ್‌ನಲ್ಲಿ ಸ್ಥಳೀಯ ಕುಸ್ತಿಪಟು ದವಾಬಂಡಿ ಮುಂಕ್ ಎರ್ಡನ್ ವಿರುದ್ಧ 10-7ರಿಂದ ಗೆಲುವು ಸಾಧಿಸಿದರು. ಕರ್ನಾಟಕ ಪೈಲ್ವಾನ್ ತಮ್ಮ ಕ್ವಾರ್ಟರ್‌ಫೈನಲ್ ಬೌಟ್‌ನಲ್ಲಿ ಕಜಕಸ್ತಾನದ ಅಮಂಗಾಲಿ ಬೆಕ್‌ಬೊಲಾತೊವ್ ಎದುರು ಸೋತಿದ್ದರು. ಆದರೆ ಬೆಕ್‌ಬೊಲಾತೊವ್ ಫೈನಲ್ ತಲುಪಿದ್ದರಿಂದ ಅರ್ಜುನ್‌ಗೆ ಪ್ಲೇ ಆಫ್ ಆಡುವ ಅವಕಾಶ ಸಿಕ್ಕಿತ್ತು. ಅರ್ಜುನ್ 2020ರ ಆವೃತ್ತಿಯಲ್ಲೂ ಕಂಚು ಗೆದ್ದಿದ್ದರು.
2020ರ ಆವೃತ್ತಿಯಲ್ಲಿ ಚಿನ್ನದ ಪದಕದ ಸಾಧನೆ ಮಾಡಿದ್ದ ಸುನಿಲ್(87 ಕೆಜಿ) ಈ ಆವೃತ್ತಿಯ ಕಂಚಿನ ಪದಕದ ಬೌಟ್‌ನಲ್ಲಿ ಮಂಗೋಲಿಯಾದ ಬಾತ್‌ಬಯಾರ್ ಲೂಟ್‌ಬಯಾರ್ ಅವರನ್ನು ಮಣಿಸಿದರು. ತಾಂತ್ರಿಕ ಶ್ರೇಷ್ಠತೆಯ ಆಧಾರದಲ್ಲಿ ಜಯ ಸಾಧಿಸಿದ ಅವರು ಸೆಮಿಫೈನಲ್‌ನಲ್ಲಿ ಉಜ್ಬೆಕಿಸ್ತಾನದ ಜಲ್ಗಾಸ್‌ಬಾಯ್ ಬೆರ್ಡಿಮುರೊತೊವ್ ವಿರುದ್ಧ ಸೋಲು ಕಂಡಿದ್ದರು. ಆದರೆ ಮೊದಲ ಸುತ್ತಿನಲ್ಲಿ ಜಪಾನ್ನ ಮಸಾಟೊ ಸುಮಿ ವಿರುದ್ಧ ಜಯ ಸಾಧಿಸಿದ್ದರು.