ಬರ್ಮಿಂಗ್ಹ್ಯಾಮ್(ಯುಕೆ):ಕಾಮನ್ವೆಲ್ತ್ ಗೇಮ್ಸ್ನಲ್ಲಿ ಮಹಿಳಾ ಹಾಕಿ ತಂಡ ನಿರಾಸೆ ಅನುಭವಿಸಿತು. ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿವಾದಾತ್ಮಕ ಶೂಟೌಟ್‌ನಲ್ಲಿ 0-3 ಅಂತರದಿಂದ ಸೋಲು ಕಂಡಿತು. 1-1 ರಲ್ಲಿ ಸಮಬಲ ಕಂಡಿದ್ದ ಪಂದ್ಯ ಫಲಿತಾಂಶಕ್ಕಾಗಿ ನಡೆದ ಶೂಟೌಟ್‌ನಲ್ಲಿ ಭಾರತ ವನಿತೆಯರು ಗೋಲು ಗಳಿಸುವಲ್ಲಿ ಯಶಸ್ವಿಯಾಗಲಿಲ್ಲ. ಫೈನಲ್ ತಲುಪುವ ಮೂಲಕ ಚಿನ್ನ, ಬೆಳ್ಳಿ ಸಾಧನೆ ಮಾಡುವ ಗುರಿಯಲ್ಲಿದ್ದ ತಂಡ ಇದಿಗ ಕಂಚಿಗಾಗಿ ನ್ಯೂಜಿಲ್ಯಾಂಡ್ ವಿರುದ್ಧ ಆ.7 ರಂದು ಹೋರಾಡಲಿದೆ.
ಭಾರತದ ವನಿತೆಯರು ಎಸಗಿದ ಸಣ್ಣಪುಟ್ಟ ತಪ್ಪುಗಳನ್ನು ಮತ್ತು ಕೆಟ್ಟ ಪಾಸ್‌ಗಳನ್ನು ಆಸ್ಟ್ರೇಲಿಯಾ ಉಪಯೋಗಿಸಿಕೊಂಡಿತು. ಪಂದ್ಯದ 8ನೇ ನಿಮಿಷದಲ್ಲಿ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಸಿಕ್ಕಿತು. ಗುರ್ಜಿತ್ ಕೌರ್ ಅದನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫಲವಾದರು.
ಬಳಿಕ 10ನೇ ನಿಮಿಷದಲ್ಲಿ ಆಸ್ಟ್ರೇಲಿಯಾದ ರೆಬೆಕಾ ಗ್ರೀನರ್ ಸವಿತಾ ಪೂನಿಯಾರ ತಡೆಗೋಡೆಯನ್ನು ಭೇದಿಸಿ ಗೋಲು ಗಳಿಸಿದರು. ಆಸ್ಟ್ರೇಲಿಯಾದ ಮುನ್ನಡೆ ಭಾರತವನ್ನು ಒತ್ತಡಕ್ಕೆ ದೂಡಿತು. ಮರು ನಿಮಿಷದಲ್ಲೇ ಮತ್ತೊಂದು ಗೋಲು ಗಳಿಸಲು ಮುಂದಾದ ಆಸ್ಟ್ರೇಲಿಯಾಗೆ ಸವಿತಾ ತಡೆಯೊಡ್ಡಿದರು.