ವೆಲೆನ್ಸಿಯಾ (ಸ್ಪೇನ್):ಇಲ್ಲಿನಡೆಯುತ್ತಿರುವ ಎಫ್‌ಐಎಚ್ ಮಹಿಳಾ ನೇಷನ್ಸ್ ಕಪ್ನಲ್ಲಿ ಭಾರತೀಯ ಮಹಿಳಾ ಹಾಕಿ ತಂಡದ ಗೆಲುವಿನ ನಾಗಾಲೋಟ ಮುಂದುವರಿದಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ 2-0 ಗೋಲುಗಳಿಂದ ಗೆಲ್ಲುವ ಮೂಲಕ ಸೆಮಿಫೈನಲ್ ತಲುಪಿತು. ಭಾರತ ತನ್ನ ಹಿಂದಿನ ಎರಡು ಪಂದ್ಯಗಳಲ್ಲಿ ಕ್ರಮವಾಗಿ ಚಿಲಿಯನ್ನು 3-1 ಮತ್ತು ಜಪಾನ್ ಅನ್ನು 2-1 ಅಂತರದಿಂದ ಸೋಲಿಸಿತ್ತು.
ಭಾರತದ ತಾರೆಯರಾದ ದೀಪ್ ಗ್ರೇಸ್ ಎಕ್ಕಾ (14ನೇ ನಿಮಿಷ) ಮತ್ತು ಗುರ್ಜಿತ್ ಕೌರ್ (59ನೇ ನಿಮಿಷ) ಗೋಲು ಬಾರಿಸಿ ಗೆಲುವು ತಂದುಕೊಟ್ಟರು. ವಿಶ್ವ ರ್ಯಾಂಕಿಂಗ್ 8 ನೇ ಸ್ಥಾನದಲ್ಲಿರುವ ಭಾರತದ ಮಹಿಳೆಯರು ಸತತ ಮೂರು ಗೆಲುವಿನೊಂದಿಗೆ 9 ಅಂಕದಿಂದ ಬಿ ಗುಂಪಿನಲ್ಲಿ ಅಗ್ರಸ್ಥಾನಲ್ಲಿದ್ದಾರೆ. ಸೆಮಿಫೈನಲ್ನಲ್ಲಿ ಐರ್ಲೆಂಡ್ ವಿರುದ್ಧ ಸೆಣಸಾಟ ನಡೆಯಲಿದೆ.
ಹಿಂದಿನ ಪಂದ್ಯಗಳಂತೆಯೇ ಚುರುಕಿನ ಆಟವಾಡಿದ ಭಾರತೀಯ ಮಹಿಳಾ ಹಾಕಿ ತಂಡ, ದಕ್ಷಿಣ ಆಫ್ರಿಕಾಕ್ಕೆ ಯಾವುದೇ ಹಂತದಲ್ಲಿ ಗೋಲು ಗಳಿಸಲು ಬಿಡಲಿಲ್ಲ. ಮೊದಲ ಕ್ವಾರ್ಟರ್‌ನ 14 ನೇ ನಿಮಿಷದಲ್ಲಿ ಯುವ ಆಟಗಾರ್ತಿ ಸಲಿಮಾ ಟೆಟೆ ನೀಡಿದ ಅತ್ಯುತ್ತಮ ಪಾಸ್ ಅನ್ನು ಆಫ್ರಿಕಾ ಗೋಲ್ಕೀಪರ್ ಅನೆಲ್ಲೆ ವ್ಯಾನ್ ಡೆವೆಂಟರ್ರನ್ನು ವಂಚಿಸಿದ ಗ್ರೇಸ್ ಎಕ್ಕಾ ಚೆಂಡನ್ನು ನಿಖರವಾಗಿ ಗೋಲು ಪೆಟ್ಟಿಗೆ ಸೇರಿಸಿದರು.
1-0 ಮುನ್ನಡೆ ಪಡೆದ ಭಾರತದ ಮಹಿಳೆಯರು, ಇನ್ನಷ್ಟು ಚುರುಕಾಗಿ ಆಟವಾಡಿದರು. ದಕ್ಷಿಣ ಆಫ್ರಿಕಾ ಮಹಿಳೆಯರು ಕೂಡ ಟಕ್ಕರ್ ನೀಡಿದಂತೆ ಆಟವಾಡಿದರೂ, ಗೋಲು ಗಳಿಸಲಿಲ್ಲ. ಮೂರನೇ ಕ್ವಾರ್ಟರ್‌ನ ಕೊನೆಯ ಗಳಿಗೆಯಲ್ಲಿ ನವನೀತ್ ಕೌರ್ ಹಾಕಿ ಸ್ಟಿಕ್ ಮಾಡಿದ ಚಮತ್ಕಾರದಿಂದ ಚೆಂಡು 59ನೇ ನಿಮಿಷದಲ್ಲಿ ಗೋಲು ಸೇರಿ ಮತ್ತೊಂದು ಅಂಕ ಭಾರತದ ಪಾಲಾಯಿತು. ಕೊನೆಯಲ್ಲಿ 2-0 ಗೋಲುಗಳಿಂದ ಗೆಲ್ಲುವ ಮೂಲಕ ಭಾರತದ ವನಿತೆಯರು ಡಿಸೆಂಬರ್ 16 ರಂದು ನಡೆಯುವ ಸೆಮಿಫೈನಲ್ನಲ್ಲಿ ಐರ್ಲೆಂಡ್ ವನಿತೆಯರನ್ನು ಎದುರಿಸಲಿದ್ದಾರೆ.
ಓದಿ:ನ್ಯೂಜಿಲ್ಯಾಂಡ್ ಟೆಸ್ಟ್ ನಾಯಕತ್ವ ತೊರೆದ ಕೇನ್ ವಿಲಿಯಮ್ಸನ್... ವೇಗಿ ಟಿಮ್ ಸೌಥಿ ಹೊಸ ಸಾರಥಿ