ಕೇಪ್ ಟೌನ್:ಸವಿತಾ ಪುನಿಯಾ ನಾಯಕತ್ವದ ಭಾರತ ಮಹಿಳಾ ಹಾಕಿ ತಂಡ ಮೂರನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 4-0 ಗೋಲುಗಳಿಂದ ಸೋಲಿಸಿತು. ಈ ಮೂಲಕ ತಂಡ ಸರಣಿಯನ್ನು ವಶಕ್ಕೆ ಪಡೆದಿದ್ದು, ದಕ್ಷಿಣ ಆಫ್ರಿಕಾ ತಂಡವನ್ನು ಕ್ಲೀನ್ ಸ್ವೀಪ್ ಮಾಡುವ ಗುರಿಯನ್ನು ಭಾರತ ಮಹಿಳಾ ಹಾಕಿ ತಂಡ ಹೊಂದಿದೆ. ಮೊದಲ ಕ್ವಾರ್ಟರ್‌ನ ಎರಡನೇ ನಿಮಿಷದಲ್ಲಿ ರಾಣಿ ರಾಂಪಾಲ್ ಭಾರತದ ಪರ ಮೊದಲ ಗೋಲು ಬಾರಿಸಿದರು. ಎರಡನೇ ಕ್ವಾರ್ಟರ್‌ನಲ್ಲಿ ಭಾರತ ಆಕ್ರಮಣಕಾರಿ ಆಟವಾಡಿದ್ದು, ದೀಪ್ ಗ್ರೇಸ್ ಎಕ್ಕಾ 18 ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿದರು. ವಂದನಾ ಕಟಾರಿಯಾ 20ನೇ ನಿಮಿಷದಲ್ಲಿ ಮೂರನೇ ಗೋಲು ದಾಖಲಿಸಿದರು. ಮೂರನೇ ಕ್ವಾರ್ಟರ್‌ನಲ್ಲಿ ದಕ್ಷಿಣ ಆಫ್ರಿಕಾ ಅದ್ಭುತವಾಗಿ ಆಡಿತು. ಆದ್ರೆ ಯಾವುದೇ ಗೋಲು ಬಾರಿಸಲು ಸಾಧ್ಯವಾಗಲಿಲ್ಲ. ಸಂಗೀತಾ ಕುಮಾರಿ 46ನೇ ನಿಮಿಷದಲ್ಲಿ ನಾಲ್ಕನೇ ಗೋಲು ಬಾರಿಸಿ ಭಾರತಕ್ಕೆ ಬಲ ತುಂಬಿದರು.
ಮೊದಲೆರಡು ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದ್ದ ಭಾರತ: ಈ ಪಂದ್ಯಕ್ಕೂ ಮುನ್ನ ಭಾರತ ಮೊದಲ ಪಂದ್ಯದಲ್ಲಿ 5-1 ಮತ್ತು ಎರಡನೇ ಪಂದ್ಯದಲ್ಲಿ 7-0 ರಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿತ್ತು. ಜನವರಿ 17ರಂದು ನಡೆದ ಪಂದ್ಯದಲ್ಲಿ ವಂದನಾ 2 ಗೋಲು ಗಳಿಸಿದರೆ, ಉದಿತಾ, ವಿಷ್ಣವಿ ವಿತವ್ ಫಾಲ್ಕೆ, ರಾಣಿ ರಾಂಪಾಲ್, ಸಂಗೀತಾ, ನವನೀತ್ ತಲಾ 1 ಗೋಲು ಗಳಿಸಿ ಮಿಂಚಿದರು. ವಿಶ್ವ ಶ್ರೇಯಾಂಕದಲ್ಲಿ ಎಂಟನೇ ಸ್ಥಾನದಲ್ಲಿರುವ ಭಾರತೀಯ ಮಹಿಳಾ ಹಾಕಿ ತಂಡವು ಜನವರಿ 16 ರಂದು ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿತು. ದಕ್ಷಿಣ ಆಫ್ರಿಕಾ ವಿಶ್ವ ಶ್ರೇಯಾಂಕದಲ್ಲಿ 22 ನೇ ಸ್ಥಾನದಲ್ಲಿದೆ.
ದಕ್ಷಿಣ ಆಫ್ರಿಕಾವನ್ನು ಕ್ಲೀನ್ ಸ್ವೀಪ್ಗೊಳಿಸುವ ಅವಕಾಶ ಭಾರತಕ್ಕಿದೆ. ಭಾರತದ ತಂಡದ ಮುಂದೆ ದಕ್ಷಿಣ ಆಫ್ರಿಕಾ ನಿಲ್ಲಲು ಸಾಧ್ಯವಾಗುತ್ತಿಲ್ಲ. ಉಭಯ ತಂಡಗಳ ನಡುವೆ ಮತ್ತೊಂದು ಪಂದ್ಯವಿದೆ. ದಕ್ಷಿಣ ಆಫ್ರಿಕಾದ ನಂತರ, ಭಾರತ ತಂಡವು ಜನವರಿ 23 ರಿಂದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವಿಶ್ವದ ನಂ.1 ತಂಡ ನೆದರ್ಲ್ಯಾಂಡ್ಸ್ ಅನ್ನು ಎದುರಿಸಲಿದೆ. ನೇಷನ್ಸ್ ಕಪ್ ಗೆದ್ದ ನಂತರ ಭಾರತ ತಂಡದ ಉತ್ಸಾಹ ಹೆಚ್ಚಾಗಿದೆ.
ತಂಡದ ಮಾಜಿ ನಾಯಕಿ ರಾಣಿ ರಾಂಪಾಲ್ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದರು. ಆದರೆ ಇದೀಗ ಅವರು ತಂಡಕ್ಕೆ ಮರಳಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಗೋಲ್‌ಕೀಪರ್ ಸವಿತಾ ಪುನಿಯಾ ತಂಡವನ್ನು ಮುನ್ನಡೆಸುತ್ತಿದ್ದು, ಅನುಭವಿ ನವನೀತ್ ಕೌರ್ ಉಪನಾಯಕಿಯಾಗಿದ್ದಾರೆ. ಡಿಸೆಂಬರ್ 2022 ರಲ್ಲಿ ಸವಿತಾ ಪುನಿಯಾ ಅವರ ನಾಯಕತ್ವದಲ್ಲಿ ಭಾರತವು ಸ್ಪೇನ್‌ನ ವೆಲೆನ್ಸಿಯಾದಲ್ಲಿ ನಡೆದ ಎಫ್‌ಐಹೆಚ್ ಮಹಿಳಾ ರಾಷ್ಟ್ರಗಳ ಕಪ್‌ನ ಮೊದಲ ಆವೃತ್ತಿಯನ್ನು ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿತು.
ಪಂದ್ಯದ ವೇಳಾಪಟ್ಟಿ ಹೀಗಿದೆ:
ಜನವರಿ 22, ಶನಿವಾರ: ದಕ್ಷಿಣ ಆಫ್ರಿಕಾ ವಿರುದ್ಧ ಭಾರತ - 8:30 PM
ಜನವರಿ 23, ಭಾನುವಾರ: ನೆದರ್ಲ್ಯಾಂಡ್ಸ್ ವಿರುದ್ಧ ಭಾರತ