ಲಿಂಬರ್ಗ್‌ನ (ಜರ್ಮನಿ):ಭಾರತ ಮಹಿಳಾ ಹಾಕಿ ತಂಡ ಜರ್ಮನಿ ಪ್ರವಾಸ ಕೈಗೊಂಡಿದ್ದು, ಜುಲೈ 16 ರಿಂದ ಜುಲೈ 19ರ ವರೆಗೆ ಚೀನಾ ಮತ್ತು ಜರ್ಮನಿ ವಿರುದ್ಧ ಆಡಲಿದೆ. ಪ್ರವಾಸದಲ್ಲಿ ಮೂರು ಪಂದ್ಯಗಳನ್ನು ಆಡಲಿರುವ ಭಾರತ, ಭಾನುವಾರ (ನಾಳೆ) ಮೊದಲ ಪಂದ್ಯದಲ್ಲಿ ಚೀನಾ ವಿರುದ್ಧ ಕಣಕ್ಕಿಳಿಯಲಿದೆ. ಗೋಲ್‌ಕೀಪರ್ ಸವಿತಾ ಮತ್ತು ವೈಸ್ ಕ್ಯಾಪ್ಟನ್ ದೀಪ್ ಗ್ರೇಸ್ ಎಕ್ಕಾ ನೇತೃತ್ವದ ತಂಡ ಲಿಂಬರ್ಗ್‌ನಲ್ಲಿ ವಿಶ್ವ ನಂ.11ರ ಚೀನಾವನ್ನು ಎದುರಿಸಲಿದೆ. ನಂತರ ಜುಲೈ 18 ಮತ್ತು ಜುಲೈ 19 ರಂದು ಕ್ರಮವಾಗಿ ವೈಸ್‌ಬಾಡೆನ್ ಮತ್ತು ರಸ್ಸೆಲ್‌ಶೀಮ್‌ನಲ್ಲಿ ಆತಿಥೇಯ ಜರ್ಮನಿ ವಿರುದ್ಧ ಎರಡು ಪಂದ್ಯಗಳನ್ನು ಆಡಲಿದೆ.
ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 8ರ ವರೆಗೆ ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್2023ಗೆ ಈ ಜರ್ಮನ್ ಪ್ರವಾಸವು ಪೂರ್ವಭಾವಿ ಪಂದ್ಯವಾಗಿ ಸಹಾಯಕವಾಗಲಿದೆ. ಏಷ್ಯನ್ ಗೇಮ್ಸ್‌ಗೆ ಮುಂಚಿತವಾಗಿ ತಮ್ಮ ಸಾಮರ್ಥ್ಯಗಳನ್ನು ಮೌಲ್ಯಮಾಪನ ಮಾಡಲು ಈ ಪ್ರವಾಸವು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ.
ಈ ಕುರಿತು ಮಾತನಾಡಿದ ಭಾರತೀಯ ಮಹಿಳಾ ಹಾಕಿ ತಂಡದ ನಾಯಕಿ ಸವಿತಾ, "ಪ್ರತಿಷ್ಠಿತ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್ 2023ಕ್ಕೆ ಮುಂಚಿತವಾಗಿ ಏಷ್ಯಾದ ಎದುರಾಳಿಯ ವಿರುದ್ಧ ನಮ್ಮನ್ನು ಪರೀಕ್ಷಿಸಿಕೊಳ್ಳಲು ಈ ಪಂದ್ಯವು ನಮಗೆ ಉತ್ತಮ ಅವಕಾಶವಾಗಿದೆ. ಈಗಾಗಲೇ ತಂಡ ಸುದೀರ್ಘ ಅಭ್ಯಾಸವನ್ನು ನಡೆಸಿ, ಸುಧಾರಿಸಬೇಕಾದ ಅಂಶಗಳ ಕುರಿತು ಚರ್ಚಿಸಿದ್ದೇವೆ. ಮುಂಬರುವ ಪಂದ್ಯಗಳಿಗೂ ನಾವು ಸಿದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.