ಹಾಂಗ್‌ಝೌ (ಚೀನಾ): ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಸ್ಪರ್ಧಿಗಳು ಉತ್ತಮ ಆರಂಭ ಪಡೆದಿದ್ದಾರೆ. ಇಂದು ಶೂಟಿಂಗ್, ರೋವಿಂಗ್ ವಿಭಾಗಗಳಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದುಕೊಂಡರು. ಇಂದು ಮೊದಲು ಬೆಳ್ಳಿ ಗೆದ್ದ ಮಹಿಳಾ ಶೂಟರ್‌ಗಳ ತಂಡದ ಆಟಗಾರ್ತಿ ರಮಿತಾ ಜಿಂದಾಲ್ ವೈಯಕ್ತಿಕವಾಗಿ ಮತ್ತೊಂದು ಪದಕಕ್ಕೆ ಕೊರಳೊಡ್ಡಿದರು. ಜೂನಿಯರ್ ವಿಶ್ವ ಚಾಂಪಿಯನ್ ಆಗಿರುವ ರಮಿತಾ ವೈಯಕ್ತಿಕ 8 ಶೂಟರ್‌ಗಳಿದ್ದ ಅಂತಿಮ ಪ್ರಶಸ್ತಿ ಸುತ್ತಿನಲ್ಲಿ 230.1 ಅಂಕಗಳೊಂದಿಗೆ ಈ ಸಾಧನೆ ಮಾಡಿದರು.
19 ವರ್ಷದ ರಮಿಕಾ ಈ ವಿಭಾಗದಲ್ಲಿ ಬೆಳ್ಳಿ ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿದ್ದರು. ಆದರೆ ಅಂತಿಮವಾಗಿ ಕಂಚಿಗೆ ತೃಪ್ತಿಪಟ್ಟುಕೊಂಡರು. ಇದೇ ವಿಭಾಗದಲ್ಲಿ ಸ್ಪರ್ಧಿಸಿದ ಮತ್ತೋರ್ವ ಭಾರತೀಯ ಆಟಗಾರ್ತಿ ಮೆಹುಲ್ 208.43 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದು ಪದಕ ವಂಚಿತರಾದರು.