ಟೆರಾಸ್ಸಾ (ಸ್ಪೇನ್) : ಇಲ್ಲಿ ನಡೆಯುತ್ತಿರುವ 100ನೇ ವಾರ್ಷಿಕೋತ್ಸವದ ಸ್ಪ್ಯಾನಿಷ್ ಹಾಕಿ ಫೆಡರೇಷನ್ ಅಂತಾರಾಷ್ಟ್ರೀಯ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಸ್ಪೇನ್ ವಿರುದ್ಧ 1-2 ಅಂತರದಿಂದ ಭಾರತ ಪುರುಷರ ಹಾಕಿ ತಂಡ ಸೋಲು ಕಂಡಿದೆ. ಮಂಗಳವಾರ ನಡೆದ ಪಂದ್ಯದಲ್ಲಿ ಭಾರತ ತಂಡವು ಹೋರಾಟದ ಪ್ರದರ್ಶನ ನೀಡಿದ್ದರೂ ಸಹಾ ಆತಿಥೇಯ ಸ್ಪೇನ್ ತಂಡವನ್ನು ಬಗ್ಗು ಬಡಿಯಲು ಸಾಧ್ಯವಾಗಲಿಲ್ಲ.
ಪೌ ಕುನಿಲ್ 11ನೇ ನಿಮಿಷದಲ್ಲಿ ಮತ್ತು ಜೋಕ್ವಿನ್ ಮೆನಿನಿ 33ನೇ ನಿಮಿಷದಲ್ಲಿ ಗೋಲು ಹೊಡೆದು ಸ್ಪೇನ್ ಶುಭರಾಂಭ ಮಾಡಲು ಕಾರಣರಾದರು. ಮೊದಲ ಕ್ವಾರ್ಟರ್‌ನಲ್ಲಿ ಭಾರತ ಪ್ರಬಲ ಒತ್ತಡದೊಂದಿಗೆ ಆಕ್ರಮಣಕಾರಿಯಾಗಿ ಪಂದ್ಯ ಪ್ರಾರಂಭಿಸಿತು. ಆದರೆ, ಮುನ್ನಡೆ ಸಾಧಿಸಲು ವಿಫಲವಾಯಿತು. ಮೊದಲ ಕ್ವಾರ್ಟರ್‌ನಲ್ಲಿ ಬಿಗಿ ಹಿಡಿತ ಸಾಧಿಸಿದ ಸ್ಪೇನ್ ತಾಳ್ಮೆ ಆಟವಾಡಿ ಪೌ ಕುನಿಲ್ 11ನೇ ನಿಮಿಷದಲ್ಲಿ ಹೊಡೆದ ಗೋಲಿನಿಂದ ಮುನ್ನಡೆ ಸಾಧಿಸಿತು.
ಬಳಿಕ ಎರಡನೇ ಕ್ವಾರ್ಟರ್‌ನಲ್ಲಿಯೂ ಭಾರತ ಪಂದ್ಯವನ್ನು ಸಮಬಲ ಮಾಡಿಕೊಳ್ಳುವ ಹುಡುಕಾಟದಲ್ಲಿ ಪ್ರತಿದಾಳಿಗಳನ್ನು ಪ್ರಾರಂಭಿಸಲು ಪ್ರಯತ್ನಿಸಿತು. ಆದರೆ, ಎರಡನೇ ಕ್ವಾರ್ಟರ್ ಗೋಲು ರಹಿತವಾಗಿ ಕೊನೆಗೊಂಡಿತ್ತು. ಈ ಮೂಲಕ ಅರ್ಧ ಸಮಯದಲ್ಲಿ ಸ್ಪೇನ್ 1-0 ಮುನ್ನಡೆ ಸಾಧಿಸಿತು. ಮೂರನೇ ಕ್ವಾರ್ಟರ್‌ನಲ್ಲಿ ಭಾರತದ ಗೋಲು ಹೊಡೆಯುವ ಪ್ರಯತ್ನವನ್ನು ಆರಂಭವಾಯಿತು. ಆದರೂ ರಕ್ಷಣಾ ಕ್ಷೇತ್ರದಲ್ಲಿ ಆತಿಥೇಯರು ಭಾರತವನ್ನು ತಡೆಯುವಲ್ಲಿ ಯಶಸ್ವಿಯಾದರು. ಈ ವೇಳೆ, ಜೋಕ್ವಿನ್ ಮೆನಿನಿ 33ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ಸ್ಪೇನ್ 2-0 ಮುನ್ನಡೆ ಕಾಯ್ದುಕೊಂಡಿತ್ತು.