ಟೋಕಿಯೊ (ಜಪಾನ್):ಅಂತಿಮವಾಗಿ ಪ್ರತಿಯೊಬ್ಬ ಭಾರತೀಯನ ಕನಸು ನನಸಾಗಿದೆ. ಬರೋಬ್ಬರಿ 41 ವರ್ಷಗಳ ಬಳಿಕ ಭಾರತದ ಪುರುಷರ ಹಾಕಿ ತಂಡವು ಟೋಕಿಯೊ ಒಲಿಂಪಿಕ್ಸ್ನಲ್ಲಿ ಸೆಮಿಪೈನಲ್ ಪ್ರವೇಶಿಸಿ ಕಂಚಿನ ಪದಕ ಗೆದ್ದುಕೊಂಡಿದೆ. ಜರ್ಮನಿ ತಂಡದ ವಿರುದ್ಧ 5-4 ಗೋಲುಗಳ ಅಂತರದಿಂದ ಸ್ಮರಣೀಯ ಗೆಲುವು ದಾಖಲಿಸಿ ಸಂಭ್ರಮಿಸಿದೆ.
ಭಾರತೀಯ ಹಾಕಿ ತಂಡದ ಗೆಲುವಿನ ಸಂಭ್ರಮ ಪಂದ್ಯದ ರೋಚಕ ಕ್ಷಣಗಳು..
ಪಂದ್ಯ ಆರಂಭವಾದ ಎರಡು ನಿಮಿಷಗಳಲ್ಲಿ ಜರ್ಮನಿಯ ತೈಮೂರ್ ಒರುಜ್ ಮೊದಲ ಗೋಲು ಬಾರಿಸುವ ಮೂಲಕ ಭಾರತ ಮೇಲೆ ಒತ್ತಡ ಹೇರಿದರು. ಈ ಗೋಲು ಮೂಲಕ ಮೊದಲ ಸುತ್ತಿನಲ್ಲಿ ಜರ್ಮನಿ ಮುನ್ನಡೆ ಸಾಧಿಸಿತು. ಬಳಿಕ ಭಾರತೀಯ ಕಲಿಗಳು ಎರಡನೇ ಸುತ್ತಿನಲ್ಲಿ ಭರ್ಜರಿ ಪ್ರದರ್ಶನ ನೀಡಿದರು. ಆದರೆ ಇದಕ್ಕೂ ಮೊದಲು ಜರ್ಮನಿ ಮತ್ತೊಂದು ಗೋಲು ಬಾರಿಸುವ ಮೂಲಕ ಭಾರತೀಯರ ಗೆಲುವಿನ ಕನಸಿಗೆ ಭಯ ಉಂಟು ಮಾಡಿತು. ಇಂಥ ಸಂದಿಗ್ಧ ಸಂದರ್ಭದಲ್ಲಿ ಭಾರತದ ಸಿಮ್ರಂಜಿತ್ ಸಿಂಗ್ ಗೋಲು ಬಾರಿಸಿದ್ದು ಕೋಟ್ಯಂತರ ಭಾರತೀಯರ ಮೊಗದಲ್ಲಿ ನಗು ಅರಳಿಸಿತು. ಆಟ ಮುಂದುವರೆದಂತೆ, ಭಾರತಕ್ಕೆ ಲಭಿಸಿದ ಎರಡು ಪೆನಾಲ್ಟಿ ಕಾರ್ನರ್ಗಳನ್ನು ಉತ್ತಮವಾಗಿ ಉಪಯೋಗಿಸಿಕೊಂಡ ತಂಡ ಎರಡು ಗೋಲು ಬಾರಿಸಿತು.
ಗೋಲ್ ಕೀಪರ್ ಬಿಗಿದಪ್ಪಿ ಖುಶಿಪಟ್ಟ ಮನ್‌ಪ್ರೀತ್ ಸಿಂಗ್ ಇನ್ನು ಮೂರನೇ ಸುತ್ತಿಗೆ ಲಗ್ಗೆ ಇಟ್ಟ ಸಂದರ್ಭದಲ್ಲಿ ಭಾರತದ ರೂಪಿಂದರ್ ಪಾಲ್ ಸಿಂಗ್ ಮತ್ತು ಸಿಮ್ರಂಜಿತ್ ಸಿಂಗ್ ಬಾರಿಸಿದ ಎರಡು ಗೋಲುಗಳು ತಂಡವನ್ನು 5-3 ಅಂತರಕ್ಕೆ ಕೊಂಡೊಯ್ಯಿತು. ಆದರೆ ನಾಲ್ಕನೇ ಸುತ್ತಿನಲ್ಲಿ ಜರ್ಮಿನಿಯ ಲುಕಾಸ್ ವಿಂಡ್‌ಫೆಡರ್ ಗೋಲು ಬಾರಿಸಿ 5-4 ರ ಮೂಲಕ ತಂಡದ ಒತ್ತಡವನ್ನು ಕೊಂಚ ಮಾಡಿದರು. ಅದಾಗಲೇ ಭಾರತ ತನ್ನ ಗೆಲುವಿನ ನಗೆ ಬೀರಲು ಸಜ್ಜಾಗಿತ್ತು.
ಬರೋಬ್ಬರಿ 49 ವರ್ಷಗಳ ಬಳಿಕ ಸೆಮಿಫೈನಲ್ ಪ್ರವೇಶಿಸಿದ್ದ ಭಾರತ ಹಾಕಿ ತಂಡ ಜರ್ಮನಿ ವಿರುದ್ಧ ನಡೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಕಂಚಿಗೆ ಮುತ್ತಿಕ್ಕಿದೆ. ಚಿನ್ನದ ನಿರೀಕ್ಷೆಯಲ್ಲಿದ್ದ ತಂಡ ಮಂಗಳವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ 2-5ರಲ್ಲಿ ಸೋತು ನಿರಾಶೆ ಅನುಭವಿಸಿತ್ತು.
ತ್ರಿವರ್ಣ ಧ್ವಜದೊಂದಿಗೆ ಭಾರತದ ಪುರುಷರ ಹಾಕಿ ತಂಡ (ಪಂದ್ಯ ಆರಂಭಕ್ಕೂ ಮುನ್ನ) ಸಾಧನೆಯ ಸಂಕ್ಷಿಪ್ತ ಇತಿಹಾಸ:
ಇದಕ್ಕೂ ಮೊದಲು 49 ವರ್ಷದ ಹಿಂದೆ 1972ರಲ್ಲಿ ಮ್ಯೂನಿಚ್ನಲ್ಲಿ ನಡೆದಿದ್ದ ಒಲಿಂಪಿಕ್ಸ್ನಲ್ಲಿ ಭಾರತ ತಂಡ ಸೆಮಿಫೈನಲ್ನಲ್ಲಿ ಪಾಕಿಸ್ತಾನದ ವಿರುದ್ಧ 2-0 ಗೋಲುಗಳ ಅಂತರದಿಂದ ಸೋಲೊಪ್ಪಿಕೊಂಡಿತ್ತು. ಇದಾದ ಬಳಿಕ ಭಾರತ ತಂಡ ಸೆಮಿಫೈನಲ್ ಪ್ರವೇಶಿಸುವಲ್ಲಿ ವಿಫಲವಾಗಿತ್ತು. ಆದರೆ, 41 ವರ್ಷದ ಹಿಂದೆ 1980ರಲ್ಲಿ ಮಾಸ್ಕೋದಲ್ಲಿ ನಡೆದ ಒಲಿಂಪಿಕ್‌ನಲ್ಲಿ ಕೇವಲ 6 ತಂಡಗಳಿದ್ದ ಕಾರಣ ಸೆಮಿಫೈನಲ್ ಹಂತ ಇಲ್ಲದೆಯೇ ಫೈನಲ್ ಪ್ರವೇಶಿಸಿತ್ತು, ಜೊತೆಗೆ ಅಂದು ಚಿನ್ನಕ್ಕೆ ಕೊರೊಳೊಡ್ಡಿತ್ತು.
ಇತಿಹಾಸದ ಪುಟಗಳಿಂದ.. 1975ರಲ್ಲಿ ಹಾಕಿ ತಂಡದ ಗೆಲುವನ್ನು ಸಂಭ್ರಮಿಸಿದ್ದ ಕ್ಷಣ