ನವದೆಹಲಿ: ಭಾರತದಲ್ಲಿ 15ನೇ ಹಾಕಿ ವಿಶ್ವಕಪ್ ಆಯೋಜಿಸಲಾಗುತ್ತಿದೆ. ಜನವರಿ 13 ರಿಂದ ಪ್ರಾರಂಭವಾಗುವ ಈ ಮಹಾನ್ ಹಾಕಿ ಕದನದಲ್ಲಿ ಭಾರತವು 48 ವರ್ಷದ ನಂತರ ಮತ್ತೆ ಚಾಂಪಿಯನ್ ಆಗುವ ಕನಸು ಹೊತ್ತಿದೆ. ವಿಶ್ವಕಪ್‌ನಲ್ಲಿ ಭಾರತ ಎರಡು ಬಾರಿ ಫೈನಲ್ ತಲುಪಿತ್ತು. ಆದರೆ 1975ರಲ್ಲಿ ಕಪ್ ಗೆದ್ದು ಕನಸು ನನಸಾಯಿತು. 1973ರ ವಿಶ್ವಕಪ್‌ನಲ್ಲಿ ನೆದರ್ಲೆಂಡ್ಸ್ ಪೆನಾಲ್ಟಿ ಶೂಟೌಟ್‌ನಲ್ಲಿ ಭಾರತವನ್ನು 4–2 ಗೋಲುಗಳಿಂದ ಸೋಲಿಸಿ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು.
ವಿಶ್ವಕಪ್ ಹಾಕಿಯ ಮೊದಲ ಪಂದ್ಯ ಭಾರತ ಮತ್ತು ಸ್ಪೇನ್ ನಡುವೆ ಜನವರಿ 13 ರಂದು ಇದೇ ಕ್ರೀಡಾಂಗಣದಲ್ಲಿ ನಡೆಯಲಿದೆ. ವಿಶ್ವಕಪ್‌ನ ಎಲ್ಲಾ ಪಂದ್ಯಗಳು ಒಡಿಶಾದ ಭುವನೇಶ್ವರ ಮತ್ತು ರೂರ್ಕೆಲಾದಲ್ಲಿ ನಡೆಯಲಿವೆ. ಈ ಸ್ಪರ್ಧೆಯಲ್ಲಿ 16 ದೇಶಗಳ ನಡುವೆ ಒಟ್ಟು 44 ಪಂದ್ಯಗಳು ನಡೆಯಲಿವೆ. ನಾಲ್ಕು ಬಾರಿ ಚಾಪಿಯನ್ ಆಗಿದ್ದ ಪಾಕಿಸ್ತಾನ ಈ ಬಾರಿಯ ವಿಶ್ವಕಪ್ಗೆ ಪ್ರವೇಶ ಪಡೆಯುವಲ್ಲಿ ವಿಫಲವಾಗಿದೆ.
ಒಲಿಂಪಿಕ್ಸ್‌ನಲ್ಲಿ ಭಾರತದ ದಾಖಲೆ:ಭಾರತವು 1928 ರಲ್ಲಿ ಆಮ್ಸ್ಟರ್ ಡ್ಯಾಮ್ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಭಾಗವಹಿಸಿತು. ಈ ಸ್ಪರ್ಧೆಯಲ್ಲಿ ಚಿನ್ನ ಗೆಲ್ಲುವ ಮೂಲಕ ತನ್ನ ಪ್ರಯಾಣವನ್ನು ಆರಂಭಿಸಿತು. ಭಾರತ ತಂಡವು 1928 ರಿಂದ 1956 ರವರೆಗೆ ಸತತ ಆರು ಬಾರಿ ಚಿನ್ನವನ್ನು ಮುಡಿಗೇರಿಸಿಕೊಂಡು ಒಲಿಂಪಿಕ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
ಹಿಟ್ಲರ್ ಮುಂದೆ ಜರ್ಮನಿಯನ್ನು ಸೋಲಿಸಿದ ಭಾರತ:1936ರ ಜರ್ಮನಿಯಲ್ಲಿ ಒಲಂಪಿಕ್ ಕ್ರೀಡೆಗಳು ಜರುಗಿದವು. ಫೈನಲ್ ಭಾರತಕ್ಕೆ ಜರ್ಮನಿ ಎದುರಾಳಿಯಾಗಿತ್ತು. ಫೈನಲ್ ಪಂದ್ಯ ವೀಕ್ಷಿಸಲು ಸ್ವತಃ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಬಂದಿದ್ದರು. ಈ ಪಂದ್ಯದಲ್ಲಿ ಭಾರತ ಜರ್ಮನಿಯನ್ನು 8-1 ಗೋಲುಗಳಿಂದ ಸೋಲಿಸಿ ಎಲ್ಲರನ್ನೂ ಅಚ್ಚರಿಗೊಳಿಸಿತು. ಈ ಪಂದ್ಯವನ್ನು ನೋಡಿದ ಹಿಟ್ಲರ್ ಭಾರತ ತಂಡದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು.
ಹಿಟ್ಲರ್ ಎದುರೇ ಜರ್ಮನಿಯನ್ನು ಬಗ್ಗುಬಡಿದ ಭಾರತ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪಾಕಿಸ್ತಾನ ವಿರುದ್ಧ ಸೇಡು ತೀರಿಸಿಕೊಂಡ ಇಂಡಿಯಾ:1960ರಲ್ಲಿ ರೋಮ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತ ಬೆಳ್ಳಿ ಪದಕ ಗೆಲ್ಲುವ ಮೂಲಕ ಎರಡನೇ ಸ್ಥಾನ ಗಳಿಸಿತ್ತು. ಫೈನಲ್‌ನಲ್ಲಿ ಪಾಕಿಸ್ತಾನವು ಭಾರತವನ್ನು 0-1 ಗೋಲುಗಳಿಂದ ಸೋಲಿಸಿತು. ಈ ಸೋಲಿನೊಂದಿಗೆ ಭಾರತ ಏಳನೇ ಬಾರಿಗೆ ಚಿನ್ನದ ಪದಕ ಗೆಲ್ಲುವ ಅವಕಾಶ ಕಳೆದುಕೊಂಡಿತು. 1964 ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಪಾಕಿಸ್ತಾನವನ್ನು 1-0 ಅಂತರದಿಂದ ಗೆದ್ದುಕೊಂಡಿತು. ಈ ಮೂಲಕ ಏಳನೇ ಒಲಿಂಪಿಕ್ಸ್ ಚಿನ್ನ ತನ್ನದಾಗಿಸಿಕೊಂಡಿತು. 1960ರ ರೋಮ್ ಒಲಿಂಪಿಕ್ಸ್‌ನ ಸೋಲಿನ ಸೇಡನ್ನು ಟೊಕಿಯೋದಲ್ಲಿ ತೀರಿಸಿತ್ತು.
ಮೂರು ಬಾರಿ ಕಂಚಿನ ಪದಕ:1968ರ ಮೆಕ್ಸಿಕೊ ಮತ್ತು 1972ರ ಮ್ಯೂನಿಚ್ ಒಲಿಂಪಿಕ್ಸ್‌ನಲ್ಲಿ ಭಾರತ ಕಂಚಿನ ಪದಕ ಗೆದ್ದಿತ್ತು. ಆದರೆ 1980ರ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಭಾರತ ತಂಡ ಮತ್ತೆ ಇತಿಹಾಸವನ್ನು ಪುನರಾವರ್ತಿಸಿ 16 ವರ್ಷಗಳ ನಂತರ ಚಿನ್ನದ ಪದಕ ಗೆದ್ದುಕೊಂಡಿತು. ಸುರೇಂದ್ರ ಸಿಂಗ್ ಸೋಧಿ ಈ ಒಲಿಂಪಿಕ್ ಗೇಮ್ಸ್‌ನಲ್ಲಿ 15 ಗೋಲುಗಳನ್ನು ಗಳಿಸಿದರು, ಇದು ಒಂದೇ ಒಲಿಂಪಿಕ್ಸ್‌ನಲ್ಲಿ ಭಾರತೀಯರು ಗಳಿಸಿದ ಅತಿ ಹೆಚ್ಚು ಗೋಲುಗಳಾಗಿವೆ. 1980ರ ನಂತರ ಒಲಿಂಪಿಕ್ಸ್‌ನ ನಂತರ ಭಾರತ ಉತ್ತಮ ಪದರ್ಶನ ಕಂಡು ಬರಲಿಲ್ಲ. 41 ವರ್ಷಗಳ ನಂತರ 2021 ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮನ್‌ಪ್ರೀತ್ ಸಿಂಗ್ ನಾಯಕತ್ವದಲ್ಲಿ ಕಂಚಿನ ಪದಕವನ್ನು ಗೆದ್ದು ದೇಶಿಯ ಆಟದ ಮೆರುಗು ಹೆಚ್ಚಿಸಿತ್ತು.
ಹಾಕಿ ರಾಷ್ಟ್ರೀಯ ಕ್ರೀಡೆ ಅಲ್ಲ:ಹಾಕಿಯಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ನೀಡಿದರೂ ರಾಷ್ಟ್ರೀಯ ಆಟದ ಸ್ಥಾನಮಾನ ಪಡೆದಿಲ್ಲ. ಭಾರತದಲ್ಲಿ ಹಾಕಿಗೆ ನ್ಯಾಶನಲ್ ಗೇಮ್ ಆಫ್ ಇಂಡಿಯಾ ಸ್ಥಾನಮಾನ ನೀಡಬೇಕೆಂಬ ಬೇಡಿಕೆ ಇತ್ತಾದರೂ ಸರ್ಕಾರ ಈ ಬಗ್ಗೆ ಯಾವುದೇ ರೀತಿ ಸ್ಥಾನಮಾನ ನೀಡಿಲ್ಲ. ಬ್ರಿಟನ್‌ನ ರಾಷ್ಟ್ರೀಯ ಕ್ರೀಡೆ ಕ್ರಿಕೆಟ್, ಅಮೆರಿಕದ ರಾಷ್ಟ್ರೀಯ ಕ್ರೀಡೆ ಬೇಸ್‌ಬಾಲ್ ಮತ್ತು ಬ್ರೆಜಿಲ್ ಮತ್ತು ಫ್ರಾನ್ಸ್‌ನ ರಾಷ್ಟ್ರೀಯ ಕ್ರೀಡೆ ಫುಟ್‌ಬಾಲ್ ಎಂದು ಗುರುತಿಸಲಾಗಿದೆ.
ಆದರೆ ಬಾಲ್ಯದಿಂದ ಹಾಕಿಯನ್ನು ರಾಷ್ಟ್ರೀಯ ಕ್ರೀಡೆ ಎಂದು ಕೇಳಿಕೊಂಡು ಬರಲಾಗಿತ್ತು. ಆದರೆ ಮಾಹಿತಿ ಹಕ್ಕು ಕಾಯ್ದೆಯಲ್ಲಿ ಸ್ವೀಕರಿಸಲಾದ ದಾಖಲೆ ಪ್ರಕಾರ ಭಾರತ ಯಾವ ಕ್ರೀಡೆಯನ್ನು ರಾಷ್ಟ್ರೀಯ ಆಟೋಟ ಎಂದು ಪರಿಗಣಿಸಿಲ್ಲ. ಹಾಕಿಯನ್ನು ಪರಿಗಣಿಸುವಂತೆ ಒತ್ತಾಯಿಸಲಾಗುತ್ತಿತ್ತು. ಅದೇ ರೀತಿ ಈಗ ಭಾರತದಲ್ಲಿ ಕ್ರಿಕೆಟ್ಗೆ ಇರುವ ಖ್ಯಾತಿ ಮತ್ತು ದೇಶಿಯ ಕ್ರೀಡೆ ಕಬಡ್ಡಿಗೆ ರಾಷ್ಟ್ರೀಯ ಆಟೋಟದ ಸ್ಥಾನಮಾನ ನೀಡುವಂತೆ ಬೇಡಿಕೆಗಳು ಇವೆ. ಉತ್ತರ ಪ್ರದೇಶದ ಗೋರಖ್‌ಪುರದ ಕಾನೂನು ವಿದ್ಯಾರ್ಥಿಯೊಬ್ಬರು ಆರ್‌ಟಿಐ ಅಡಿ ಭಾರತ ಸರ್ಕಾರವು ಯಾವ ಆಟವನ್ನು ರಾಷ್ಟ್ರೀಯ ಆಟ ಎಂದು ಗುರುತಿಸಿದೆಯಾ ಎಂದು ಸಲ್ಲಿಸಿದ್ದ ಅರ್ಜಿಗೆ ಸಚಿವಾಲಯ, ಭಾರತವು ಯಾವುದೇ ಕ್ರೀಡೆಯನ್ನು ರಾಷ್ಟ್ರೀಯ ಕ್ರೀಡೆಯಾಗಿ ಗುರುತಿಸಿಲ್ಲ ಎಂದು ತಿಳಿಸಿತ್ತು.
ಇದನ್ನೂ ಓದಿ:1975ರ ವಿಶ್ವಕಪ್ ಗೆಲುವು ಪಾಕ್ ಮೇಲಿನ ಯುದ್ಧದ ವಿಜಯದಂತಿತ್ತು.. ಹರ್ಚರಣ್ ಸಿಂಗ್