ನವದೆಹಲಿ:ಅಜರ್ಬೈಜಾನ್ನ ಬಾಕುವಿನಲ್ಲಿ ನಡೆದ ಫಿಡೆ ಚೆಸ್ ವಿಶ್ವಕಪ್ನಲ್ಲಿ ರನ್ನರ್‌ಅಪ್ ಆಗಿ ಹೊರಹೊಮ್ಮಿರುವ ಭಾರತದ ಭರವಸೆಯ ಆಟಗಾರ ಆರ್.ಪ್ರಜ್ಞಾನಂದ ಅವರಿಗೆ 80 ಸಾವಿರ ಅಮೆರಿಕ ಡಾಲರ್ ಎಂದರೆ, ಅಂದಾಜು 66.13 ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ. ವಿಶ್ವಕಪ್ ಗೆದ್ದ ನಾರ್ವೆಯ ಮ್ಯಾಗ್ನಸ್ ಕಾರ್ಲ್ಸನ್ ಅವರಿಗೆ 110 ಸಾವಿರ ಡಾಲರ್ (ಅಂದಾಜು 90.90 ಲಕ್ಷ ರೂಪಾಯಿ) ಲಭಿಸಿದೆ.
ಚೆಸ್ ವಿಶ್ವಕಪ್ ಪಂದ್ಯವು ಆರ್.ಪ್ರಜ್ಞಾನಂದ ಹಾಗೂ ಕಾರ್ಲ್ಸನ್ ನಡುವಿನ ತೀವ್ರ ಪೈಪೋಟಿಯಿಂದಾಗಿ ಮಂಗಳವಾರ ಹಾಗೂ ಬುಧವಾರ ಸತತ ಎರಡು ದಿನಗಳು ಡ್ರಾನಲ್ಲಿ ಅಂತ್ಯಕಂಡಿತ್ತು. ಹೀಗಾಗಿ ಗುರುವಾರ ಅಲ್ಪಾವಧಿಯ ಟೈ-ಬ್ರೇಕ್ ಪಂದ್ಯವನ್ನು ನಡೆಸಲಾಗಿತ್ತು. ಇದರಲ್ಲಿ 1.5-0.5 ಅಂತರದಿಂದ ಕಾರ್ಲ್ಸನ್ ಗೆಲುವು ಸಾಧಿಸಿದ್ದರು. ವೀರೋಚಿತ ಪ್ರರ್ದಶನದ ನಡುವೆಯೂ ರನ್ನರ್‌ಅಪ್ ಆಗಿದ್ದ ಪ್ರಜ್ಞಾನಂದ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಫೈನಲ್ನಲ್ಲಿ ಸೋತರೂ ಕೂಡ 18 ವರ್ಷದ ಅತಿ ಕಿರಿಯ ವಯಸ್ಸಿಗೆ ಪ್ರಜ್ಞಾನಂದ ಮಾಡಿದ ಈ ಸಾಧನೆಯು ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಿಡಿದು ಪ್ರತಿಯೊಬ್ಬರು ಪ್ರಜ್ಞಾನಂದ ಪ್ರಯತ್ನವನ್ನು ಕೊಂಡಾಡಿದ್ದಾರೆ.
''ಫಿಡೆ ವಿಶ್ವಕಪ್ನಲ್ಲಿ ಪ್ರಜ್ಞಾನಂದ ತೋರಿದ ಗಮನಾರ್ಹ ಪ್ರದರ್ಶನದಿಂದ ನಾವು ಹೆಮ್ಮೆಪಡುತ್ತೇವೆ!. ಫೈನಲ್ ಪಂದ್ಯಲ್ಲಿ ಅವರು ಅಸಾಧಾರಣ ಕೌಶಲ್ಯಗಳು ಪ್ರದರ್ಶಿಸಿದರು. ಅಗ್ರಜ ಮ್ಯಾಗ್ನಸ್ ಕಾರ್ಲ್ಸನ್ ಅವರಿಗೆ ಕಠಿಣ ಪೈಪೋಟಿಯನ್ನು ಒಡ್ಡಿದರು. ಅವರು ಇಟ್ಟಿರುವ ಪುಟ್ಟ ಹೆಜ್ಜೆ ಇದಾಗಿದೆ. ಮುಂಬರುವ ಪಂದ್ಯಾವಳಿಗಳಿಗೆ ಶುಭಕೋರುತ್ತೇವೆ'' ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.