ನವದೆಹಲಿ: ಇಂದಿನಿಂದ ದುಬೈನಲ್ಲಿ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಆರಂಭವಾಗಲಿದೆ. ಮುಂಬರುವ ಒಲಿಂಪಿಕ್ಸ್ ಸ್ಪರ್ಧೆಗಳಿಗೆ ಸಜ್ಜಾಗುತ್ತಿರುವ ಭಾರತದ ಬಾಕ್ಸರ್‌ಗಳಿಗೆ ಏಷ್ಯನ್ ಚಾಂಪಿಯನ್‌ಷಿಪ್ ಉತ್ತಮ ವೇದಿಕೆಯಾಗಿದ್ದು, ಕಳೆದ ಆವೃತ್ತಿಗಿಂತ ಈ ಬಾರಿ ಉತ್ತಮ ಪ್ರದರ್ಶನ ತೋರುವ ನಿರೀಕ್ಷೆಯಲ್ಲಿ ಭಾರತದ ಬಾಕ್ಸರ್‌ಗಳು ತಯಾರಾಗಿದ್ದಾರೆ.
ಭಾರತದ 9 ಪುರುಷರು ಮತ್ತು 10 ಮಹಿಳೆಯರನ್ನು ಒಳಗೊಂಡಂತೆ ಒಟ್ಟು 19 ಬಾಕ್ಸರ್‌ಗಳು ಕೂಟದಲ್ಲಿ ಸ್ಪರ್ಧಿಸುತ್ತಿದ್ದು, ಉತ್ತಮ ನಿರ್ವಹಣೆ ತೋರುವವರಿಗೆ ಈ ಬಾರಿ ಪದಕಗಳೊಂದಿಗೆ ಬಹುಮಾನದ ಮೊತ್ತವೂ ಬೋನಸ್ ಆಗಿ ಸಿಗಲಿದೆ.
ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ವಿಜೇತ ಮೊಹಮ್ಮದ್ ಹುಸಾಮುದ್ದೀನ್ (56 ಕೆ.ಜಿ), ಏಷ್ಯಾದ ಮಾಜಿ ಚಾಂಪಿಯನ್ ಶಿವ ಥಾಪಾ (64 ಕೆ.ಜಿ) ಮತ್ತು ಸುಮಿತ್ ಸಾಂಗ್ವಾನ್ (81 ಕೆ.ಜಿ) ಇಂದು ತಮ್ಮ ಅಭಿಯಾನ ಶುರು ಮಾಡಲಿದ್ದಾರೆ.
ಹಾಲಿ ಚಾಂಪಿಯನ್ ಅಮಿತ್ ಪಂಗಾಲ್ (52 ಕೆ.ಜಿ) ಮೊದಲ ಸುತ್ತಿನಲ್ಲಿ ಬೈ ಪಡೆದ ಕಾರಣ ಅವರು ನೇರ ಕ್ವಾರ್ಟರ್ ಫೈನಲ್‌ನಲ್ಲಿ ಮಂಗೋಲಿಯಾದ ಎನ್‌ಖ್ಮನಾಡಖ್ ಖಾರ್ಖು ಅವರನ್ನು ಎದುರಿಸಲಿದ್ದಾರೆ. ಇನ್ನು, ಆಶಿಶ್ ಕುಮಾರ್ (75 ಕೆ.ಜಿ) ಕೂಡ ಮೊದಲ ಸುತ್ತಿನ ಬೈ ಪಡೆದಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್‌ನ ಬೆಳ್ಳಿ ಪದಕ ವಿಜೇತ ಕಜಕಿಸ್ತಾನದ ಅಬಿಲ್‌ಖಾನ್ ಅಮಾನ್‌ಕುಲ್ ಅವರನ್ನು ತಮ್ಮ ಆರಂಭಿಕ ಪಂದ್ಯದಲ್ಲಿ ಎದುರಿಸಲಿದ್ದಾರೆ.