ಹ್ಯಾಂಗ್ಝೌ:ಚೀನಾದ ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ ಪ್ಯಾರಾ ಏಷ್ಯನ್ ಗೇಮ್ಸ್ನಲ್ಲಿ ಭಾರತ ಹೊಸ ದಾಖಲೆ ಬರೆದಿದೆ. ಏಷ್ಯನ್ ಪ್ಯಾರ ಗೇಮ್ಸ್ನ ಕೊನೆಯ ದಿನವಾದ ಇಂದು 100 ಪದಕಗಳನ್ನು ಗೆಲ್ಲುವ ಮೂಲಕ ಪ್ಯಾರಾ ಅಥ್ಲೀಟ್ಗಳು ಇತಿಹಾಸದ ಪುಟದಲ್ಲಿ ಭಾರತದ ಹೆಸರನ್ನು ಅಚ್ಚೊತ್ತಿದ್ದಾರೆ. 2018ರ ಪ್ಯಾರಾ ಗೇಮ್ಸ್ನಲ್ಲಿ ಭಾರತ 72 ಪದಕಗಳನ್ನು ಗೆದ್ದಿದ್ದು ಇದುವರೆಗಿನ ಅತ್ಯಧಿಕ ಸಾಧನೆಯಾಗಿತ್ತು. ಇದೀಗ ಹಿಂದಿನ ದಾಖಲೆಯನ್ನು ಮುರಿದಿರುವ ಪ್ಯಾರಾ ಅಥ್ಲೀಟ್ಗಳು ಈವರೆಗೂ ಒಟ್ಟು 108 ಪಂದ್ಯಗಳನ್ನು ಗೆದ್ದು ಮುನ್ನಗುತ್ತಿದ್ದಾರೆ.
ಟ್ವೀಟ್ ಮಾಡಿ ಅಭಿನಂದಿಸಿದ ಪ್ರಧಾನಿ ಮೋದಿ:ಈ ಮಹತ್ತರ ಸಾಧನೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಪ್ಯಾರಾ ಅಥ್ಲೀಟ್ಗಳಿಗೆ ಶುಭಕೋರಿದ್ದಾರೆ. ತಮ್ಮ ಅಧಿಕೃತ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ, ಪ್ಯಾರಾ ಏಷ್ಯನ್ ಗೇಮ್ಸ್ನಲ್ಲಿ ಭಾರತಕ್ಕೆ 100 ಪದಕಗಳ ಗರಿ! ಇದು ಅಪೂರ್ವ ಆನಂದದ ಕ್ಷಣವಾಗಿದೆ. ಈ ಯಶಸ್ಸು ನಮ್ಮ ಕ್ರೀಡಾಪಟುಗಳ ಪ್ರತಿಭೆ, ಕಠಿಣ ಪರಿಶ್ರಮ ಮತ್ತು ದೃಢ ನಿರ್ಧಾರದ ಫಲವಾಗಿದೆ. ಈ ಗಮನಾರ್ಹ ಸಾಧನೆ ಮಾಡಿದ ಕ್ರೀಡಾಪಟುಗಳು, ತರಬೇತುದಾರರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಭಾರತದ ಯುವಕರಿಗೆ ಅಸಾಧ್ಯವಾದದು ಯಾವುದೂ ಇಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಈ ಸಾಧನೆ ನಮಗೆಲ್ಲರಿಗೂ ಸ್ಫೂರ್ತಿದಾಯಕ ಎಂದು ಪೋಸ್ಟ್ನಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.
ಚೆಸ್ನಲ್ಲಿ ಚಿನ್ನ, ಬೆಳ್ಳಿ, : ಚೆಸ್ನಲ್ಲಿ ಭಾರತ ಮೂರು ಪದಕಗಳನ್ನು ಜಯಿಸಿದೆ. ಪುರುಷರ ಬಿ1 ಚೆಸ್ ಈವೆಂಟ್ನಲ್ಲಿ ದರ್ಪಣ್ ಇನ್ನಾನಿ ಅಶ್ವಿನ್ ಮಕ್ವಾನ, ಸೌಂದರ್ಯ ಪ್ರದಾನ ಅವರ ಒಳಗೊಂಡ ತಂಡ ಫೈನಲ್ ಪಂದ್ಯದಲ್ಲಿ ಎದುರಾಳಿ ತಂಡವನ್ನು ಮಣಿಸಿ ಕ್ರಮವಾಗಿ ಚಿನ್ನ, ಬೆಳ್ಳಿ, ಕಂಚು ಮುಡಿಗೇರಿಸಿಕೊಂಡಿದ್ದಾರೆ.