ರಾಂಚಿ (ಜಾರ್ಖಂಡ್):ರಾಜಧಾನಿ ರಾಂಚಿಯಲ್ಲಿ ಎಫ್‌ಐಎಚ್ ಹಾಕಿ ಒಲಿಂಪಿಕ್ ಅರ್ಹತಾ ಪಂದ್ಯಗಳು ನಡೆಯಲಿದ್ದು, ಭಾರತೀಯ ಮಹಿಳಾ ಹಾಕಿ ತಂಡ ಗೆಲುವಿನ ನಿರೀಕ್ಷೆ ಹೊಂದಿದೆ. ಪ್ಯಾರಿಸ್ನಲ್ಲಿ ನಡೆಯುವ ಜಾಗತಿಕ ಕ್ರೀಡಾಜಾತ್ರೆ ಒಲಿಂಪಿಕ್ಸ್‌ಗೆ ಸ್ಥಾನ ಪಡೆಯುವ ಭರವಸೆ ಹೊಂದಿರುವ ತಂಡ, ಅದಕ್ಕೆ ಬೇಕಾದ ಎಲ್ಲ ಸಿದ್ಧತೆ ಕೂಡ ನಡೆಸಿದೆ. ಶನಿವಾರ ಅರ್ಹತಾ ಪಂದ್ಯಗಳು ನಡೆಯಲಿದ್ದು, ಕ್ವಾಲಿಫೈಯರ್‌ನ ಆರಂಭಿಕ ಪಂದ್ಯದಲ್ಲಿ ಭಾರತೀಯ ಮಹಿಳಾ ಹಾಕಿ ಅಮೆರಿಕವನ್ನು ಎದುರಿಸಲಿದೆ. ಮುಂಬರುವ 2024ರ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾ ಜಾತ್ರೆಗೆ ಅರ್ಹತೆ ಪಡೆಯಲು ಭಾರತವು ಮೊದಲ ಮೂರರಲ್ಲಿ ಸ್ಥಾನ ಪಡೆಯಬೇಕಾಗಿದೆ.
ಪ್ಯಾರಿಸ್ ಒಲಿಂಪಿಕ್ಸ್‌ಗೆ ಸ್ಥಾನ ಪಡೆಯುವ ಕದನ ಶನಿವಾರ ಆರಂಭವಾಗಲಿದ್ದು, ರಾಂಚಿಯ ಮರಂಗ್ ಗೊಮ್ಕೆ ಜೈಪಾಲ್ ಸಿಂಗ್ ಆಸ್ಟ್ರೋಟರ್ಫ್ ಹಾಕಿ ಕ್ರೀಡಾಂಗಣ ಸಿದ್ಧತೆಗೊಂಡಿದೆ. ಎಂಟು ತಂಡಗಳು ಕಣದಲ್ಲಿವೆ. ಜರ್ಮನಿ, ಜಪಾನ್, ಚಿಲಿ ಮತ್ತು ಝೆಕ್ ರಿಪಬ್ಲಿಕ್ ತಂಡಗಳು ಪೂಲ್ ಎ ಗುಂಪಿನಲ್ಲಿದ್ದರೆ, ಆತಿಥೇಯ ಭಾರತವು ಅಮೆರಿಕ, ನ್ಯೂಜಿಲೆಂಡ್ ಮತ್ತು ಇಟಲಿಯೊಂದಿಗೆ ಪೂಲ್ ಬಿ ಗುಂಪಿನಲ್ಲಿದೆ.
ಈ ಟೂರ್ನಿಯಲ್ಲಿ ಅಗ್ರ ಮೂರು ಸ್ಥಾನ ಗಳಿಸುವ ತಂಡಗಳಿಗೆ ಮಾತ್ರ ಒಲಿಂಪಿಕ್ಸ್‌ಗೆ ಟಿಕೆಟ್ ದೊರೆಯಲಿದೆ. ಸ್ಥಾನ ಪಡೆಯಲು ಸವಿತಾ ನೇತೃತ್ವದ ಭಾರತೀಯ ಮಹಿಳಾ ಹಾಕಿ ತಂಡ, ನಾಳೆಯೇ ಅಮೆರಿಕ ತಂಡವನ್ನು ಎದುರಿಸಲಿದೆ. ಏಷ್ಯನ್ ಗೇಮ್ಸ್‌ನಲ್ಲಿ ಮೂರನೇ ಸ್ಥಾನ ಪಡೆದು ನಿರಾಸೆ ಅನುಭವಿಸಿದ್ದ ಭಾರತ, ಅದನ್ನು ಮರೆತು ಇಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ವಿಶ್ವದ ಐದನೇ ಕ್ರಮಾಂಕದ ಜರ್ಮನಿ ಇಲ್ಲಿ ಅತಿ ಹೆಚ್ಚಿನ ರ್‍ಯಾಂಕ್ ಪಡೆದ ತಂಡವಾದರೆ, ಭಾರತ (ಆರನೇ ಕ್ರಮಾಂಕ) ಎರಡನೇ ಉತ್ತಮ ರ್‍ಯಾಂಕ್ ಪಡೆದ ತಂಡವಾಗಿದೆ. ಇತ್ತೀಚೆಗೆ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಸೆಮಿ-ಫೈನಲ್‌ನಲ್ಲಿ ಚೀನಾ ವಿರುದ್ಧ ಭಾರತ ಸೆಣಸಿತ್ತು.