ಹ್ಯಾಂಗ್‌ಝೌ(ಚೀನಾ):ಏಷ್ಯನ್ ಗೇಮ್ಸ್‌ನ 8 ನೇ ದಿನವಾದ ಇಂದು ಪುರುಷರ ಟ್ರ್ಯಾಪ್ ಶೂಟಿಂಗ್ ವಿಭಾಗದಲ್ಲಿ ಭಾರತದ ಪೃಥ್ವಿರಾಜ್ ತೊಂಡೈಮಾನ್, ಕಿನಾನ್ ಚೆನೈ ಮತ್ತು ಜೊರಾವರ್ ಸಿಂಗ್ ಸಂಧು ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಈ ಗೆಲುವಿಗೂ ಮುನ್ನ, ಮಹಿಳಾ ಟ್ರ್ಯಾಪ್ ಶೂಟಿಂಗ್ ವಿಭಾಗದಲ್ಲಿ ಮನೀಶಾ ಕೀರ್, ಪ್ರೀತಿ ರಜಾಕ್ ಮತ್ತು ರಾಜೇಶ್ವರಿ ಕುಮಾರಿ ಅವರು ಬೆಳ್ಳಿ ಪದಕವನ್ನು ಪಡೆದಿದ್ದು, ಭಾರತ ತಂಡ ಈ ಬಾರಿಯ ಏಷ್ಯನ್ ಗೇಮ್ಸ್ನಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿದೆ.
ಭಾರತದ ಪುರುಷರು 361 ಶೂಟ್ ಮಾಡಿ ಚಿನ್ನ ಮುಡಿಗೇರಿಸಿಕೊಂಡರೆ, ಖಲೀದ್ ಅಲ್ಮುದಾಫ್, ತಲಾಲ್ ಅಲ್ರಾಶಿದಿ ಮತ್ತು ಅಬ್ದುಲ್ರಹ್ಮಾನ್ ಅಲ್ಫೈಹಾನ್ (359) ಶೂಟ್ನಿಂದ ಬೆಳ್ಳಿ ಪದಕಕ್ಕೆ ಅರ್ಹರಾದರು. ಹಾಗೇ ಆತಿಥೇಯ ಚೀನಾದ ಯುಹಾವೊ ಗುವೊ, ಯಿಂಗ್ ಕಿ ಮತ್ತು ಯುಹಾವೊ ವಾಂಗ್ (354) ಶೂಟ್ ಮೂಲಕ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.
ಟ್ರಾಪ್ ಶೂಟಿಂಗ್ ಮಹಿಳಾ ವಿಭಾಗಕ್ಕೆ ಬೆಳ್ಳಿ
ಕೊನೆಯದಾಗಿ ಶೂಟ್ ಮಾಡಿದ ಅಲ್ರಾಶಿದಿ ತನ್ನ ಅತ್ಯುತ್ತಮ ಪ್ರಯತ್ನದಿಂದ ಶೂಟ್ ಮಾಡಿ 24 ಅಂಕಗಳನ್ನು ಗಳಿಸಿದರು. ಆದರೆ ಆ ಅಂಕ ಭಾರತದ ಮೊತ್ತವನ್ನು ಮೀರಿಸುವಲ್ಲಿ ವಿಫಲವಾಗಿದೆ. ಇದರ ನಡುವೆ ಭಾರತ ಮಹಿಳಾ ತಂಡವು ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಒಟ್ಟು 337 ಅಂಕಗಳಿಸಿ ದ್ವಿತೀಯ ಸ್ಥಾನ ಪಡೆದರು. ಕಜಕಿಸ್ತಾನದ ಮರಿಯಾ ಡಿಮಿಟ್ರಿಯೆಂಕೊ, ಐಜಾನ್ ಡೊಸ್ಮಗಂಬೆಟೊವಾ ಮತ್ತು ಅನಸ್ತಾಸಿಯಾ ಪ್ರಿಲೆಪಿನಾ (336) ಶೂಟ್ ಮೂಲಕ ಕಂಚಿನ ಪದಕ ಪಡೆದರು.
ಜೊತೆಗೆ ಭಾರತೀಯ ತಂಡದ ಮನೀಶಾ ಕೀರ್ ಕೂಡ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಆಕೆ ಇತರ ಮೂರು ಸ್ಪರ್ಧಿಗಳ ಜೊತೆ 114 ರನ್‌ಗೆ ಟೈ ಆದರೂ, ಶೂಟ್-ಆಫ್ ಮೂಲಕ ಮುನ್ನಡೆದರು. ಜತೆಗೆ ಪುರುಷರ ಸ್ಪರ್ಧೆಯಲ್ಲಿ ಕಿನಾನ್ ಚೆನೈ (122) ಮತ್ತು ಜೋರಾವರ್ ಸಿಂಗ್ ಸಂಧು (120) ಕೂಡ ವೈಯಕ್ತಿಕ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ.
ಇದನ್ನೂ ಓದಿ:Asian Games 2023: 10000 ಮೀ ಓಟದಲ್ಲಿ ಭಾರತಕ್ಕೆ ಎರಡು ಪದಕದ ಗರಿ.. ಕಾರ್ತಿಕ್ಗೆ ಬೆಳ್ಳಿ, ಗುಲ್ವೀರ್ಗೆ ಕಂಚು