ಚೆನ್ನೈ:ಮಲೇಷ್ಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ 4-3 ಗೋಲುಗಳ ಅಂತರದ ಗೆಲುವು ಸಾಧಿಸಿದ ಭಾರತ ತಂಡ ನಾಲ್ಕನೇ ಬಾರಿಗೆ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಶನಿವಾರ ಚೆನ್ನೈನ ಮೇಯರ್ ರಾಧಾಕೃಷ್ಣನ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದ ಆರಂಭದಲ್ಲಿ ಮಲೇಷ್ಯಾ ಅಮೋಘ ಆಟವಾಟ ಪ್ರದರ್ಶಿಸಿದರೂ, ಅಂತಿಮ ಘಟ್ಟದಲ್ಲಿ ಪುನರಾಗಮನ ತೋರಿದ ಟೀಂ ಇಂಡಿಯಾ ಗೆಲುವಿನ ನಗೆ ಬೀರಿತು.
ಮೊದಲಾರ್ಧದಲ್ಲಿ ಮಲೇಷ್ಯಾವು ಆಕ್ರಮಣಕಾರಿಯಾಗಿ ಆಟವಾಡಿದ್ದರಿಂದ ಎದುರಾಳಿಯನ್ನು ನಿಯಂತ್ರಿಸಲು ಭಾರತೀಯರು ಹರಸಾಹಸಪಟ್ಟರು. ಅರ್ಧ ಆಟದ ಮುಕ್ತಾಯದ ವೇಳೆಗೆ ಮಲೇಷ್ಯಾ 3-1ರಿಂದ ಭಾರತಕ್ಕಿಂತ ಮುಂದಿತ್ತು. ಮೂರನೇ ಕ್ವಾರ್ಟರ್‌ನ ಕೊನೆಯ ನಿಮಿಷದಲ್ಲಿ ಎರಡು ಅದ್ಭುತ ಗೋಲುಗಳನ್ನು ಗಳಿಸುವ ಮೂಲಕ ಭಾರತ 3-3ರಿಂದ ಸಮಬಲ ಸಾಧಿಸಿತು.
ಮಲೇಷ್ಯಾದ ಕನಸು ಭಗ್ನ:ಬಳಿಕ ನಾಲ್ಕನೇ ಅರ್ಧದಲ್ಲಿ ಆಕಾಶದೀಪ್ ಸಿಂಗ್ ಬಾರಿಸಿದ ಅದ್ಭುತ ಗೋಲಿನಿಂದ ಭಾರತ 4-3 ಅಂತರದಲ್ಲಿ ಮಲೇಷ್ಯಾವನ್ನು ಸೋಲಿಸಿ ದಾಖಲೆಯ ನಾಲ್ಕನೇ ಬಾರಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿದೆ. ಪಂದ್ಯದ ಸೋಲಿನೊಂದಿಗೆ 2023ರ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯನ್ನು ಚೊಚ್ಚಲ ಬಾರಿಗೆ ಗೆಲ್ಲುವ ಮಲೇಷ್ಯಾದ ಕನಸು ಭಗ್ನಗೊಂಡಿದೆ.
ಭಾರತ ಪರ 9ನೇ ನಿಮಿಷದಲ್ಲಿ ಜುಗರಾಜ್ ಸಿಂಗ್ ಪ್ರಥಮ ಗೋಲು ದಾಖಲಿಸಿದರು. ಮಲೇಷ್ಯಾ ಪರ ಅಜ್ರಾಯಿ ಅಬು ಕಮಾಲ್ 14ನೇ ನಿಮಿಷ, ರಹೀಮ್ ರಾಜಿ 18ನೇ ನಿಮಿಷ ಮತ್ತು ಮುಹಮ್ಮದ್ ಅಮಿನುದ್ದೀನ್ 28ನೇ ನಿಮಿಷದಲ್ಲಿ ಗೋಲು ಗಳಿಸಿದರು. ಮಲೇಷ್ಯಾ ಅರ್ಧ ಸಮಯದವರೆಗೆ ಅತ್ಯಂತ ಆಕ್ರಮಣಕಾರಿ ಆಟದ ಮೂಲಕ ಭಾರತ ತಂಡದ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಿತ್ತು.