ಚೆನ್ನೈ( ತಮಿಳುನಾಡು):ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ಭಾರತ, ಜಪಾನ್ ತಂಡವನ್ನು 5-0 ಗೋಲುಗಳ ಅಂತರದಿಂದ ಪರಾಭವಗೊಳಿಸಿದೆ. ಚೆನ್ನೈನ ಮೇಯರ್ ರಾಧಾಕೃಷ್ಣನ್ ಸ್ಟೇಡಿಯಂನಲ್ಲಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಜಪಾನ್ ತಂಡಕ್ಕೆ ಯಾವುದೇ ಗೋಲುಗಳನ್ನು ನೀಡದೇ ಭರ್ಜರಿ ಜಯ ದಾಖಲಿಸಿ ಫೈನಲ್ಗೆ ಲಗ್ಗೆ ಇಟ್ಟಿದೆ.
ಇನ್ನೊಂದು ಕಡೆ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮಲೇಷ್ಯಾ ಹಾಕಿ ತಂಡ ಕೊರಿಯಾವನ್ನು ಪರಾಜಯಗೊಳಿಸಿ ಫೈನಲ್ಗೆ ಲಗ್ಗೆ ಇಟ್ಟಿದೆ. ಈ ಎರಡು ಫಲಿತಾಂಶದ ಪರಿಣಾಮ ಭಾರತ ಹಾಗೂ ಮಲೇಷ್ಯಾ ತಂಡಗಳು ಅಂತಿಮ ಹಣಾಹಣಿಯಲ್ಲಿ ಮುಖಾಮುಖಿ ಆಗಲಿವೆ. ಇಂದು ಫೈನಲ್ ಪಂದ್ಯ ನಡೆಯಲಿದೆ. ಭಾರತ ನಿನ್ನೆಯ ಪಂದ್ಯವನ್ನು ಗೆಲ್ಲುವ ಮೂಲಕ ಐದನೇ ಬಾರಿಗೆ ಏಷ್ಯಾ ಕಪ್ ಫೈನಲ್ಗೆ ಲಗ್ಗೆ ಇಟ್ಟಂತಾಗಿದೆ.
ಶುಕ್ರವಾರ ಚೆನ್ನೈನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಜಪಾನ್ ತಂಡವನ್ನು 5-0 ಗೋಲುಗಳಿಂದ ಗೆದ್ದುಕೊಂಡಿದೆ. ಇಂದು ಮಲೇಷ್ಯಾವನ್ನು ಎದುರಿಸಲಿದೆ. ಇನ್ನೊಂದು ಪಂದ್ಯದಲ್ಲಿ ಮಲೇಷ್ಯಾ ತಂಡ 6–2 ಗೋಲುಗಳಿಂದ ದಕ್ಷಿಣ ಕೊರಿಯಾವನ್ನು ಸೋಲಿಸಿ ಫೈನಲ್ಗೆ ಲಗ್ಗೆ ಇಟ್ಟಿದ್ದು, ಇಂದು ಭಾರತವನ್ನು ಎದುರಿಸಿ ಕಪ್ಗಾಗಿ ಸೆಣಸಲಿದೆ.
ರೌಂಡ್ ರಾಬಿನ್ ಲೀಗ್ ಹಂತದಲ್ಲಿ ಭಾರತ 5-0 ಅಂತರದಲ್ಲಿ ಮಲೇಷ್ಯಾ ತಂಡವನ್ನು ಮಣಿಸಿತ್ತು ಎನ್ನುವುದು ಇಲ್ಲಿ ವಿಶೇಷವಾಗಿದೆ. ಇನ್ನು ನಿನ್ನೆಯ ಪಂದ್ಯದಲ್ಲಿ ಭಾರತದ ಹಾಕಿ ತಂಡದ ಪರ ಆಕಾಶದೀಪ್ ಸಿಂಗ್ (19ನೇ ನಿಮಿಷ), ನಾಯಕ ಹರ್ಮನ್‌ಪ್ರೀತ್ ಸಿಂಗ್ (23ನೇ ನಿಮಿಷ), ಮನ್‌ದೀಪ್ ಸಿಂಗ್ (30ನೇ ನಿಮಿಷ), ಸುಮಿತ್ (39ನೇ ನಿಮಿಷ) ಮತ್ತು ಸೆಲ್ವಂ ಕಾರ್ತಿ (51ನೇ ನಿಮಿಷ) ತಲಾ ಒಂದೊಂದು ಗೋಲುಗಳನ್ನು ಗಳಿಸುವ ಮೂಲಕ ಸಾಂಗಿಕ ಹೋರಾಟ ನಡೆಸಿ, ಜಪಾನ್ಗೆ ಮಣ್ಣುಮುಕ್ಕಿಸಿದರು. ಸತತ ಗೋಲುಗಳನ್ನ ಗಳಿಸಿದ ಭಾರತ ತಂಡ ಎದುರಾಳಿಗೆ ಗೋಲು ಗಳಿಸುವ ಅವಕಾಶವನ್ನೇ ನೀಡಲಿಲ್ಲ.
ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಎಲ್ಲ ಪಂದ್ಯಗಳಲ್ಲಿ ಜಯವನ್ನು ದಾಖಲಿಸಿ ಅಜೇಯವಾಗಿಯೇ ಉಳಿದಿದೆ. ಆದರೆ ಕಳೆದ 5 ವರ್ಷಗಳಿಂದ ಭಾರತ ಫೈನಲ್ನಲ್ಲಿ ಗೆಲುವು ಸಾಧಿಸುವಲ್ಲಿ ವಿಫಲವಾಗಿದೆ. 2018 ರಲ್ಲಿ ನಡೆದ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡ ಪಾಕಿಸ್ತಾನದೊಂದಿಗೆ ಜಂಟಿ ವಿಜೇತವಾಗಿತ್ತು. ಹೀಗಾಗಿ ಈ ಬಾರಿ ಫೈನಲ್ನಲ್ ಪಂದ್ಯವನ್ನು ಗೆದ್ದು ಕಪ್ ಮುಡಿಗೇರಿಸಿಕೊಳ್ಳುವ ಉತ್ಸಾಹದಲ್ಲಿ ಭಾರತ ತಂಡವಿದೆ.
ಇದನ್ನು ಓದಿ: Hockey: ಹಾಕಿ ಚಾಂಪಿಯನ್ಸ್ ಟ್ರೋಫಿಯಲ್ಲಿಂದು ಭಾರತ-ಜಪಾನ್ ಸೆಮಿಫೈನಲ್: ಯಾರಿಗೆ ಫೈನಲ್ ಟಿಕೆಟ್?