ಚೆನ್ನೈ:7ನೇ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಭಾರತ ತಂಡಕ್ಕೆ ಫೈನಲ್ ಪ್ರವೇಶಿಸಲು ಇನ್ನು ಒಂದು ಹೆಜ್ಜೆ ಬಾಕಿ ಇದೆ. ಇಂದು ಭಾರತ ತಂಡ ಜಪಾನ್ ವಿರುದ್ಧ ಸೆಮಿಫೈನಲ್ ಆಡಲಿದೆ. ಈ ಪಂದ್ಯ ಗೆದ್ದಲ್ಲಿ ಭಾರತ 5ನೇ ಬಾರಿಗೆ ಫೈನಲ್ ಪ್ರವೇಶಿಸಿದಂತಾಗುತ್ತದೆ. 3 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಭಾರತ ನಾಲ್ಕನೇ ಟ್ರೋಫಿಗಾಗಿ ತವಕಿಸುತ್ತಿದೆ.
ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಸೆಮಿಫೈನಲ್ವರೆಗೆ ಭಾರತ ಅದ್ಭುತವಾಗಿ ಆಡಿದೆ. ರೌಂಡ್ ರಾಬಿನ್ ಹಂತದಲ್ಲಿ 4 ಪಂದ್ಯಗಳನ್ನು ಗೆದ್ದು ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.
ಆದರೆ ಇಂದಿನ ಸೆಮಿಫೈನಲ್ನಲ್ಲಿ ಭಾರತಕ್ಕೆ ಕಠಿಣ ಪೈಪೋಟಿ ಎದುರಾಗಲಿದೆ. ರೌಂಡ್ ರಾಬಿನ್ ಹಂತದಲ್ಲಿ ಭಾರತಕ್ಕೆ ಕಠಿಣ ಸವಾಲಾಗಿದ್ದೇ ಜಪಾನ್. ಜಪಾನ್ ವಿರುದ್ಧ 1-1ರಿಂದ ಸಮಬಲ ಸಾಧಿಸಿದ್ದು ಬಿಟ್ಟರೆ ಬೇರೆಲ್ಲ ತಂಡಗಳನ್ನು ಭಾರತ ಸುಲಭವಾಗಿ ಮಣಿಸಿತ್ತು. ಆದ್ದರಿಂದ ಭಾರತ ತಂಡ ಜಪಾನ್ ಅನ್ನು ಹಗುರವಾಗಿ ಪರಿಗಣಿಸುವಂತಿಲ್ಲ.
ಭಾರತ- ಜಪಾನ್ ನಡುವೆ ಇದುವರೆಗೆ 34 ಪಂದ್ಯಗಳು ನಡೆದಿವೆ. ಇವುಗಳಲ್ಲಿ ಭಾರತ 27 ಪಂದ್ಯಗಳನ್ನು ಗೆದ್ದರೆ, ಜಪಾನ್ 3 ಪಂದ್ಯಗಳಲ್ಲಿ ಜಯಿಸಿದೆ. 4 ಪಂದ್ಯಗಳು ಡ್ರಾ ಆಗಿವೆ. ಭಾರತ ಶ್ರೇಯಾಂಕದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರೆ, ಜಪಾನ್ 19ರಲ್ಲಿದೆ. 2021ರ ಸೆಮಿಫೈನಲ್ನಲ್ಲಿ ಭಾರತ, ಜಪಾನ್ ಮುಖಾಮುಖಿಯಾಗಿತ್ತು. ಅಂದು ಜಪಾನ್ 5-3 ರಿಂದ ಭಾರತವನ್ನು ಮಣಿಸಿತ್ತು. ಇದೀಗ ಭಾರತ ಸೇಡನ್ನು ತೀರಿಸಿಕೊಳ್ಳುವ ಉತ್ಸಾಹದಲ್ಲಿದೆ.
ಉತ್ತಮ ಫಾರ್ಮ್ನಲ್ಲಿ ಭಾರತ ತಂಡ: ರೌಂಡ್ ರಾಬಿನ್ ಹಂತದ ಕೊನೆಯ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು ಎದುರಿಸಿತ್ತು. ಇದರಲ್ಲಿ ಭಾರತ 4-0ಯಿಂದ ಪಂದ್ಯ ಗೆದ್ದುಕೊಂಡಿದೆ. ಚೆನ್ನೈನ ಮೇಯರ್ ರಾಧಾಕೃಷ್ಣನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ತಂಡದ ನಾಯಕ ಹರ್ಮನ್ಪ್ರೀತ್ ಸಿಂಗ್ ಎರಡು ಗೋಲು (15, 23 ನೇ ನಿಮಿಷ), ಜುಗರಾಜ್ ಸಿಂಗ್ (36ನೇ ನಿಮಿಷ) ಮತ್ತು ಆಕಾಶದೀಪ್ ಸಿಂಗ್ (55ನೇ ನಿಮಿಷ) ತಲಾ ಒಂದು ಗೋಲು ಗಳಿಸಿದರು. ಪೆನಾಲ್ಟಿ ಕಾರ್ನರ್‌ಗಳಿಂದ ಮೂರು ಗೋಲುಗಳು ಬಂದರೆ, ಆಕಾಶದೀಪ್ ಫೀಲ್ಡ್ ನೇರ ಗೋಲು ಪಡೆದಿದ್ದರು.
ಉಳಿದ ನಾಲ್ಕರಲ್ಲಿ ಚೀನಾ (7-2 ಗೋಲು), ಮಲೇಷ್ಯಾ (5-0) ಮತ್ತು ದಕ್ಷಿಣ ಕೊರಿಯಾ ತಂಡದೆದುರು (3-2)ರಿಂದ ಭಾರತ ಜಯಭೇರಿ ಸಾಧಿಸಿತ್ತು. ಜಪಾನ್ (1-1) ಎದುರು ಮಾತ್ರ ಡ್ರಾ ಮೂಲಕ ಪಂದ್ಯ ಅಂತ್ಯವಾಗಿತ್ತು.