ನವದೆಹಲಿ:2023 ರ ಸಾಲಿನ 49 ನೇ ಕಿಂಗ್ಸ್ ಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಭಾರತ ಹಿರಿಯರ ಫುಟ್ಬಾಲ್ ತಂಡವು ಇರಾಕ್ ವಿರುದ್ಧ ಸೆ.7 ರಂದು ಸೆಣಸಾಡಲಿದೆ. ಥಾಯ್ಲೆಂಡ್ನ ಚಿಯಾಂಗ್ ಮಾಯ್‌ನಲ್ಲಿರುವ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಅದೇ ದಿನ ಸಂಜೆ ನಡೆಯಲಿರುವ 2ನೇ ಸೆಮೀಸ್ನಲ್ಲಿ ಆತಿಥೇಯ ಥಾಯ್ಲೆಂಡ್ನ ಮತ್ತು ಲೆಬನಾನ್ ಎದುರಾಗಲಿವೆ.
ಥಾಯ್ಲೆಂಡ್ ಫುಟ್‌ಬಾಲ್ ಅಸೋಸಿಯೇಷನ್ ಆಯೋಜಿಸುವ ವಾರ್ಷಿಕ ಕ್ರೀಡಾಕೂಟದ ಸೆಮಿಫೈನಲ್ ತಂಡಗಳನ್ನು ಬುಧವಾರ 'ಡ್ರಾ' ಮೂಲಕ ನಿರ್ಧರಿಸಲಾಯಿತು. ಥಾಯ್ಲೆಂಡ್ v/s ಲೆಬನಾನ್, ಭಾರತ v/s ಇರಾಕ್ ನಡುವೆ ಫೈನಲ್ ಟಿಕೆಟ್ಗಾಗಿ ಕಾದಾಟ ನಡೆಯಲಿದೆ. ಸೆಪ್ಟೆಂಬರ್ 7 ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿದ್ದು, ಅಲ್ಲಿ ಗೆದ್ದವರು ಸೆಪ್ಟೆಂಬರ್ 10 ರಂದು ನಡೆಯುವ ಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ. ಎರಡು ಸೆಮಿಫೈನಲ್‌ಗಳಲ್ಲಿ ಸೋತವರು ಸೆಪ್ಟೆಂಬರ್ 10 ರಂದು ಮೂರನೇ ಸ್ಥಾನಕ್ಕಾಗಿ ಪ್ಲೇಆಫ್‌ನಲ್ಲಿ ಆಡಲಿದ್ದಾರೆ.
ಇರಾಕ್ ವಿರುದ್ಧ ಕೊನೆಯ ಬಾರಿಗೆ 2010 ರಲ್ಲಿ ಬಾಗ್ದಾದ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ಎದುರಿಸಿತ್ತು. ಆಗ 0-2 ರಲ್ಲಿ ಸೋಲು ಕಂಡಿತ್ತು. ಅದಾದ ಬಳಿಕ ಇತ್ತಂಡಗಳ ಮಧ್ಯೆ ಮತ್ತೊಂದು ಪಂದ್ಯ ನಡೆಯುತ್ತಿದೆ. ಟೂರ್ನಿಯಲ್ಲಿ ಇರಾಕ್ ತಂಡ(70) ಹೆಚ್ಚಿನ ಶ್ರೇಯಾಂಕ ಹೊಂದಿದೆ. ಭಾರತ 99 ನೇ ರ್ಯಾಂಕ್, ಆತಿಥೇಯ ಥಾಯ್ಲೆಂಡ್ 113, ಲೆಬನಾನ್ 100ನೇ ಶ್ರೇಯಾಂಕದಲ್ಲಿದೆ.