ರಾಂಚಿ(ಜಾರ್ಖಂಡ್):ಭಾರತ ಮಹಿಳಾ ಹಾಕಿ ತಂಡ ಭಾನುವಾರ ಜಪಾನ್ ತಂಡವನ್ನು 4-0 ಗೋಲುಗಳಿಂದ ಸೋಲಿಸುವ ಮೂಲಕ ಎರಡನೇ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿ ಜಯಿಸಿತು. ಸಂಗೀತಾ ಕುಮಾರಿ (17ನೇ ನಿಮಿಷ), ನೇಹಾ (46ನೇ ನಿಮಿಷ), ಲಾರೆಮ್ಸಿಯಾಮಿ (57ನೇ ನಿಮಿಷ) ಮತ್ತು ವಂದನಾ ಕಟಾರಿಯಾ (60ನೇ ನಿಮಿಷ) ಅವರ ಗೋಲುಗಳ ನೆರವಿನಿಂದ ತಂಡವು ಪ್ರತಿಷ್ಟಿತ ಟ್ರೋಫಿ ಎತ್ತಿ ಹಿಡಿಯಿತು.
ಫ್ಲಡ್ ಲೈಟ್ ಸಮಸ್ಯೆಯಿಂದ ಪಂದ್ಯ 50 ನಿಮಿಷಗಳ ಕಾಲ ತಡವಾಗಿ ಆರಂಭವಾಯಿತು. ರಾಂಚಿಯ ಮರಂಗ್ ಗೊಮ್ಕೆ ಜೈಪಾಲ್ ಸಿಂಗ್ ಮುಂಡಾ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಿತು. ಈ ಪಂದ್ಯದುದ್ದಕ್ಕೂ ಭಾರತ ಅಮೋಘ ಫಾರ್ಮ್ ಪ್ರದರ್ಶಿಸಿತು.
17ನೇ ನಿಮಿಷದಲ್ಲಿ ಸಂಗೀತಾ ಅದ್ಭುತ ಗೋಲು ಗಳಿಸಿ ಭಾರತಕ್ಕೆ 1-0 ಮುನ್ನಡೆ ತಂದುಕೊಟ್ಟರು. ಒಂದು ಗೋಲಿನಿಂದ ಹಿಂದೆ ಬಿದ್ದ ಜಪಾನ್ ತನ್ನ ದಾಳಿಯನ್ನು ತೀವ್ರಗೊಳಿಸಿ 22ನೇ ನಿಮಿಷದಲ್ಲಿ ಗೋಲು ದಾಖಲಿಸಿತು. ಆದರೆ ಭಾರತೀಯ ನಾಯಕಿ ವಿಡಿಯೋ ರೆಫರಲ್ ತೆಗೆದುಕೊಂಡರು. ಆಗ ಗೋಲ್ ಫೌಲ್ ಎಂದು ಘೋಷಿಸಲಾಯಿತು. ನೇಹಾ 46ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಭಾರತಕ್ಕೆ ಎರಡನೇ ಗೋಲು ತಂದಿಟ್ಟರು. 52ನೇ ನಿಮಿಷದಲ್ಲಿ ಜಪಾನ್‌ಗೆ ಗೋಲು ಗಳಿಸುವ ಅವಕಾಶ ಸಿಕ್ಕಿತು. ಭಾರತದ ಆಟಗಾರರು ಜಪಾನ್ ಆಟಗಾರ್ತಿಯನ್ನು ತಪ್ಪಾಗಿ ತಡೆದಿದ್ದಕ್ಕಾಗಿ ಜಪಾನ್‌ಗೆ ಪೆನಾಲ್ಟಿ ಸಿಕ್ಕಿತು. ಆದರೆ ಭಾರತದ ಗೋಲ್‌ಕೀಪರ್ ಸವಿತಾ ಪುನಿಯಾ ಅವರು ಜಪಾನ್ ಗೋಲು ಗಳಿಸದಂತೆ ತಡೆದರು.