ಸಲಾಲಾಹ್ (ಒಮಾನ್):ಪುರುಷರ ಜೂನಿಯರ್ ಏಷ್ಯಾಕಪ್ ಹಾಕಿ 2023 ರ ಫೈನಲ್‌ನಲ್ಲಿ ಪಾಕಿಸ್ತಾನವನ್ನು 2-1 ಗೋಲುಗಳಿಂದ ಸೋಲಿಸಿದ ಭಾರತ ದಾಖಲೆಯ ನಾಲ್ಕನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿತು. ಅರಿಜಿತ್ ಸಿಂಗ್ ಹುಂದಾಲ್ ಮತ್ತು ಅಂಗದ್ ಬೀರ್ ಸಿಂಗ್ ಅವರ ಆಕರ್ಷಕ ಗೋಲುಗಳು ತಂಡಕ್ಕೆ ಸ್ಮರಣೀಯ ಜಯ ತಂದುಕೊಟ್ಟವು.
ಒಮಾನ್‌ನ ಸಲಾಲಾಹ್ದಲ್ಲಿರುವ ಸುಲ್ತಾನ್ ಕಬೂಸ್ ಯೂತ್ ಕಾಂಪ್ಲೆಕ್ಸ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ರೋಚಕ ಪಂದ್ಯದಲ್ಲಿ ಭಾರತದ ಆಟಗಾರರು ಆರಂಭದಿಂದಲೇ ಮೇಲುಗೈ ಸಾಧಿಸಿದರು. ಮೊದಲ ಕ್ವಾರ್ಟರ್‌ನಲ್ಲಿ ಅಂಗದ್ ಬೀರ್ ಸಿಂಗ್ 13 ನೇ ನಿಮಿಷದಲ್ಲಿ ಗೋಲ್ ಬಾರಿಸುವ ಮೂಲಕ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಒತ್ತಡ ಅನುಭವಿಸಿದ ಪಾಕಿಸ್ತಾನ ಹಲವು ಅವಕಾಶಗಳನ್ನು ಸೃಷ್ಟಿಸಿಕೊಂಡರೂ ಅವುಗಳನ್ನು ಗೋಲಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಪಾಕಿಸ್ತಾನ ಒಂದು ಗೋಲಿನಿಂದ ಹಿನ್ನಡೆಯಲ್ಲಿದ್ದಾಗ ಎರಡನೇ ಕ್ವಾರ್ಟರ್‌ನ 20 ನೇ ನಿಮಿಷದಲ್ಲಿ ಅರ್ಜಿತ್ ಹುಂಡಲ್ ಸಿಂಗ್ ಮತ್ತೊಂದು ಗೋಲು ಗಳಿಸಿ ಮಿಂಚಿದರು.
2-0 ಗೋಲುಗಳ ಮುನ್ನಡೆ ಸಾಧಿಸಿದ ನಂತರ ಪಾಕಿಸ್ತಾನ ತನ್ನ ಆಟಕ್ಕೆ ವೇಗ ನೀಡಿತು. ತಂಡಕ್ಕೆ ಮೂರನೇ ಕ್ವಾರ್ಟರ್‌ನಲ್ಲಿ ಯಶಸ್ಸು ಸಿಕ್ಕಿತು. 38 ನೇ ನಿಮಿಷದಲ್ಲಿ ಬಶರತ್ ಅಲಿ ಗೋಲು ಬಾರಿಸುವ ಮೂಲಕ ಪಾಕ್ ಖಾತೆ ತೆರೆಯಿತು. ಬಳಿಕ ನಾಲ್ಕನೇ ಕ್ವಾರ್ಟರ್‌ನಲ್ಲಿ ಉಭಯ ತಂಡಗಳು ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಭಾರತ 2-1 ಅಂತರದಿಂದ ಪಂದ್ಯ ಗೆದ್ದುಕೊಂಡಿತು.
ಈ ಗೆಲುವಿನೊಂದಿಗೆ ಭಾರತ ಪುರುಷರ ಜೂನಿಯರ್ ಏಷ್ಯಾಕಪ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ರಾಷ್ಟ್ರ ಎನಿಸಿಕೊಂಡಿದೆ. ಏಷ್ಯಾಕಪ್ ಪ್ರಶಸ್ತಿಯನ್ನು ಅತಿ ಹೆಚ್ಚು ಬಾರಿ ಗೆದ್ದ ದಾಖಲೆಯನ್ನು ತಂಡ ಹೊಂದಿದೆ. ಇದಕ್ಕೂ ಮುನ್ನ ಭಾರತ- ಪಾಕಿಸ್ತಾನ ಜಂಟಿಯಾಗಿ ಮೂರು ಬಾರಿ ಪ್ರಶಸ್ತಿ ಗೆದ್ದ ದಾಖಲೆ ಹೊಂದಿದ್ದವು. ಭಾರತ 2004, 2008 ಮತ್ತು 2015 ರಲ್ಲಿ ಪ್ರಶಸ್ತಿ ಗೆದ್ದರೆ, ಪಾಕಿಸ್ತಾನ 1988, 1992, 1996 ರಲ್ಲಿ ಕಪ್ ಗೆದ್ದಿದೆ.
ಮಲೇಷ್ಯಾದಲ್ಲಿ ನಡೆದ ಎಫ್‌ಐಎಚ್ ಪುರುಷರ ಜೂನಿಯರ್ ವಿಶ್ವಕಪ್‌ಗೆ ಅರ್ಹತೆ ಪಡೆದ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ತಂಡದ ಸಾಂಘಿಕ ಪ್ರಯತ್ನ ಮತ್ತು ಅಜೇಯ ದಾಖಲೆ ಗುರುತಿಸಿದ ಹಾಕಿ ಇಂಡಿಯಾ ಕಾರ್ಯಕಾರಿ ಮಂಡಳಿಯು ಆಟಗಾರರಿಗೆ ತಲಾ 2 ಲಕ್ಷ ರೂ ಮತ್ತು ಸಹಾಯಕ ಸಿಬ್ಬಂದಿಗೆ ತಲಾ 1 ಲಕ್ಷ ರೂ ನಗದು ಬಹುಮಾನ ಘೋಷಿಸಿದೆ.
ತಂಡವನ್ನು ಅಭಿನಂದಿಸಿದ ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟಿರ್ಕಿ, "ಭಾರತೀಯ ಜೂನಿಯರ್ ಪುರುಷರ ತಂಡವು ಜೂನಿಯರ್ ಏಷ್ಯಾಕಪ್‌ನಲ್ಲಿ ತಮ್ಮ ಅಜೇಯ ಪ್ರದರ್ಶನ ಅತ್ಯಂತ ಹೆಮ್ಮೆ ತಂದಿದೆ. ಕಳೆದ ಕೆಲವು ತಿಂಗಳುಗಳಲ್ಲಿ ವಿಶೇಷವಾಗಿ ಸುಲ್ತಾನ್ ಆಫ್ ಜೋಹರ್ ಕಪ್‌ನಲ್ಲಿ ಐತಿಹಾಸಿಕ ಗೆಲುವಿನ ನಂತರ ಮತ್ತೆ ಪ್ರಾಬಲ್ಯ ಸಾಧಿಸಿದ್ದಾರೆ. ಈ ದೊಡ್ಡ ಗೆಲುವು ಈ ವರ್ಷದ ನಂತರ ಜೂನಿಯರ್ ವಿಶ್ವಕಪ್‌ಗೆ ಉತ್ತಮ ಸ್ಥಾನ ನೀಡುತ್ತದೆ. ಹಾಕಿ ಇಂಡಿಯಾ ಆಟಗಾರರನ್ನು ಗೌರವಿಸಲು ನಿರ್ಧರಿಸಿದೆ" ಎಂದು ಹೇಳಿದರು.
ಇದನ್ನೂ ಓದಿ:ಜೂ.ಏಷ್ಯಾ ಕಪ್ ಹಾಕಿ: ಕೊರಿಯಾ ಮಣಿಸಿ ಫೈನಲ್‌ಗೇರಿದ ಭಾರತ; ಇಂದು ಪಾಕ್ ಜೊತೆ ಕಾದಾಟ