ನವದೆಹಲಿ: 2036ರ ಒಲಿಂಪಿಕ್ಸ್ ಮತ್ತು 2030 ಯೂತ್ ಗೇಮ್ಸ್ ಆತಿಥ್ಯ ವಹಿಸಲು ದೇಶವು ಪ್ರಯತ್ನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಭಾಗವಹಿಸಿದ ಅಥ್ಲೀಟ್ಗಳೊಂದಿಗಿನ ಸಂವಾದದ ವೇಳೆ ಪ್ರಸ್ತಾಪಿಸಿದ್ದಾರೆ.
ದೆಹಲಿಯ ಮೇಜರ್ ಧ್ಯಾನ್ ಚಂದ್ ಸ್ಟೇಡಿಯಂನಲ್ಲಿ ಪ್ಯಾರಾ ಅಥ್ಲೀಟ್‌ಗಳೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ, ಸರ್ಕಾರದ ವಿಧಾನವು "ಕ್ರೀಡಾಪಟು ಕೇಂದ್ರಿತ" ವಾಗಿದೆ. ಭಾರತವು ತನ್ನ ಕ್ರೀಡಾ ಸಂಸ್ಕೃತಿ ದೃಷ್ಟಿಯಿಂದ ಮತ್ತು "ಕ್ರೀಡಾ ಸಮಾಜ" ವಾಗಿಯೂ ಬೆಳೆಯುತ್ತಿದೆ. ನಾವು 2030 ಯೂತ್ ಒಲಿಂಪಿಕ್ಸ್ ಮತ್ತು 2036 ಒಲಿಂಪಿಕ್ಸ್ ಅನ್ನು ಆಯೋಜಿಸಲು ಪ್ರಯತ್ನಿಸುತ್ತಿದ್ದೇವೆ ಇದರಿಂದ ಭಾರತವು ಮುನ್ನಡೆಯಲು ಆತ್ಮಸ್ಥೈರ್ಯ ಗಳಿಸುತ್ತದೆ ಎಂದು ಅವರು ಹೇಳಿದರು.
"ನಿಮ್ಮನ್ನು ಭೇಟಿಯಾಗಲು ನಾನು ಅವಕಾಶಗಳನ್ನು ಹುಡುಕುತ್ತಲೇ ಇದ್ದೇನೆ. ನಾನು ನಿಮ್ಮ ನಡುವೆ ಬಂದಿರುವುದು ಒಂದೇ ಒಂದು ವಿಷಯಕ್ಕಾಗಿ ಮತ್ತು ಅದು ನಿಮ್ಮನ್ನು ಅಭಿನಂದಿಸಲು. ನೀವು ಭಾರತದ ಹೊರಗೆ, ಚೀನಾದಲ್ಲಿ ಆಡುತ್ತಿದ್ದೀರಿ. ನೀವೆಲ್ಲರೂ ದೇಶವನ್ನು ಹೆಮ್ಮೆ ಪಡುವಂತೆ ಮಾಡಿದ ರೀತಿ ಸಂಪೂರ್ಣವಾಗಿ ಅಭೂತಪೂರ್ವವಾಗಿದೆ. ನಿಮ್ಮ ಕಾರ್ಯವೈಖರಿಯು ಇಡೀ ರಾಷ್ಟ್ರವನ್ನು ರೋಮಾಂಚನಗೊಳಿಸಿದೆ" ಎಂದರು.
"ನಿಮ್ಮಲ್ಲಿ ಆಟಗಳಿಗೆ ಆಯ್ಕೆಯಾದವರು, ಕೆಲವರು ಗೆದ್ದರು, ಕೆಲವರು ಕಲಿತರು. ಆದರೆ ಯಾರೂ ಸೋತಿಲ್ಲ ... ಕ್ರೀಡೆಯಲ್ಲಿ, ಕೇವಲ ಎರಡು ವಿಷಯಗಳು ನಡೆಯುತ್ತವೆ, ಒಂದೋ ನೀವು ಗೆಲ್ಲುತ್ತೀರಿ ಅಥವಾ ನೀವು ಕಲಿಯುತ್ತೀರಿ. ನೀವು ಎಂದಿಗೂ ಸೋಲುವುದಿಲ್ಲ" ಎಂದಿದ್ದಾರೆ.