ವೇಲೆನ್ಸಿಯಾ(ಸ್ಪೇನ್):ಶನಿವಾರ ಇಲ್ಲಿ ನಡೆದ ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್(ಎಫ್ಐಹೆಚ್) ನೇಷನ್ಸ್ ಕಪ್ ಫೈನಲ್ ಹಣಾಹಣಿಯಲ್ಲಿ ಭಾರತದ ವನಿತೆಯರ ತಂಡವು 1-0 ಗೋಲುಗಳ ಅಂತರದಿಂದ ಸ್ಪೇನ್ ಸೋಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಈ ಗೆಲುವಿನೊಂದಿಗೆ 2023-24ರ ಪ್ರೊ ಲೀಗ್ನಲ್ಲಿ ಭಾರತದ ಸ್ಥಾನ ಖಚಿತವಾಗಿದೆ.
ಆರನೇ ನಿಮಿಷದಲ್ಲಿ ಗುರ್ಜಿತ್ ಕೌರ್ ಪೆನಾಲ್ಟಿ ಕಾರ್ನರ್ನಿಂದ ಪಂದ್ಯದ ಏಕೈಕ ಅತ್ಯಮೂಲ್ಯ ಗೋಲು ಗಳಿಸಿ ತಂಡಕ್ಕೆ ಮೇಲುಗೈ ಒದಗಿಸಿದರು. ಕಾಮನ್ವೆಲ್ತ್ ಗೇಮ್ಸ್ ಕಂಚಿನ ಪದಕ ವಿಜೇತ ಭಾರತವು 8 ರಾಷ್ಟ್ರಗಳು ಭಾಗವಹಿಸಿದ್ದ ಈ ಟೂರ್ನಿಯಲ್ಲಿ ಐದು ಗೆಲುವು ದಾಖಲಿಸಿರುವುದು ಗಮನಾರ್ಹ ಸಾಧನೆಯಾಗಿದೆ.
ಜನ್ನೆಕೆ ಸ್ಕೋಪ್ಮನ್ ತರಬೇತಿಯಲ್ಲಿ ಮುನ್ನಡೆದ ಭಾರತ ಶುಕ್ರವಾರ ಸೆಮಿಫೈನಲ್ನಲ್ಲಿ ಶೂಟೌಟ್ ಮೂಲಕ 2-1 ಗೋಲುಗಳಿಂದ ಐರ್ಲೆಂಡ್ ಅನ್ನು ಮಣಿಸಿತ್ತು. ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ ಚಾರ್ಟ್ನಲ್ಲಿ ಭಾರತವು ಸ್ಪೇನ್ (ಏಳನೇ) ನಂತರದ ಸ್ಥಾನ ಪಡೆದಿದೆ.
ನೇಷನ್ಸ್ ಕಪ್ ಗೆಲ್ಲುವ ಮೂಲಕ 2023-24ರ ಎಫ್ಐಹೆಚ್ ಹಾಕಿ ಮಹಿಳಾ ಪ್ರೊ ಲೀಗ್ಗೆ ಭಾರತ ತಂಡಕ್ಕೆ ಬಡ್ತಿ ಸಿಕ್ಕಿದೆ. ಈ ಟೂರ್ನಿಯು ಮುಂದಿನ ವರ್ಷದ ಏಷ್ಯನ್ ಗೇಮ್ಸ್ ಮತ್ತು 2024ರ ಪ್ಯಾರಿಸ್ ಒಲಿಂಪಿಕ್ಸ್ಗೂ ಮುನ್ನ ನಡೆಯುವ ಮಹತ್ವದ ಟೂರ್ನಿಯಾಗಿದೆ.
2021-22 ಋತುವಿನಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಹೊರಗುಳಿದ ಕಾರಣ ಭಾರತ ಮತ್ತು ಸ್ಪೇನ್ ಬದಲಿ ತಂಡಗಳಾಗಿ ಆಡಿದ್ದವು. ಆಗ ಭಾರತವು ಮೂರನೇ ಸ್ಥಾನ ಗಳಿಸಿತ್ತು. ಅಲ್ಲದೆ, 2022-23ರ ಪ್ರೊ ಲೀಗ್ ಸೀಸನ್ಗೆ ಅರ್ಹತೆ ಪಡೆದಿರಲಿಲ್ಲ.