ಹ್ಯಾಂಗ್‌ಝೌ (ಚೀನಾ): 19ನೇ ಏಷ್ಯನ್ ಗೇಮ್ಸ್ನ 8ನೇ ದಿನವಾದ ಇಂದು (ಭಾನುವಾರ) 15 ಪದಕ ಬೇಟೆ ಮಾಡಿದೆ. ಪುರುಷರ ಟ್ಯ್ರಾಪ್ ಶೂಟಿಂಗ್, ಶಾಟ್‌ಪುಟ್ ಮತ್ತು 3000 ಮೀಟರ್ ಸ್ಟೀಪಲ್ ಚೇಸ್‌ನಲ್ಲಿ ಭಾರತಕ್ಕೆ ಬಂಗಾರ ಒಲಿದಿದೆ. ಇನ್ನೂ 7 ಬೆಳ್ಳಿ ಮತ್ತು 5 ಕಂಚಿನ ಪದಕ ಭಾರತದ ಪಾಲಾಗಿದೆ. ಒಟ್ಟಾರೆ, 13 ಚಿನ್ನ, 21 ಬೆಳ್ಳಿ ಮತ್ತು 19 ಕಂಚು ಸೇರಿ ಭಾರತ 53 ಪದಕಗಳಿಂದ ಪದಕ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.
ಇಂದು ಆರಂಭದಲ್ಲಿ ಕನ್ನಡತಿ ಅದಿತಿ ಅಶೋಕ್ ಅವರು ಗಾಲ್ಫ್ನಲ್ಲಿ ಬೆಳ್ಳಿ ಗೆಲ್ಲುವ ಮೂಲಕ ಪದಕ ಬೇಟೆ ಆರಂಭಿಸಿದರು. ಏಷ್ಯನ್ ಗೇಮ್ಸ್ ಗಾಲ್ಫ್ ಕ್ರೀಡೆಯಲ್ಲಿ ಪದಕ ಜಯಿಸಿದ ಭಾರತದ ಮೊದಲ ಮಹಿಳೆ ಎಂಬ ದಾಖಲೆ ಬರೆದಿದ್ದಾರೆ. ಫೈನಲ್ನಲ್ಲಿ ಆರಂಭದಿಂದ ಮುನ್ನಡೆಯಲ್ಲಿದ್ದ ಅದಿತಿ ಕೊನೆಯ ಕೆಲ ತಪ್ಪುಗಳಿಂದ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟು ಬೆಳ್ಳಿ ಗೆದ್ದರು.
ನಂತರ ಪುರುಷರ ಟ್ರ್ಯಾಪ್ ಶೂಟಿಂಗ್ ವಿಭಾಗದಲ್ಲಿ ಭಾರತದ ಪೃಥ್ವಿರಾಜ್ ತೊಂಡೈಮಾನ್, ಕಿನಾನ್ ಚೆನೈ ಮತ್ತು ಜೊರಾವರ್ ಸಿಂಗ್ ಸಂಧು ಚಿನ್ನದ ಪದಕ ಗೆದ್ದರು. ಇದು ಭಾರತಕ್ಕೆ 11ನೇ ಚಿನ್ನದ ಪದಕವಾಗಿತ್ತು. ವನಿತೆಯರ ಟ್ರ್ಯಾಪ್ ಶೂಟಿಂಗ್ ವಿಭಾಗದಲ್ಲಿ ಮನೀಶಾ ಕೀರ್, ಪ್ರೀತಿ ರಜಾಕ್ ಮತ್ತು ರಾಜೇಶ್ವರಿ ಕುಮಾರಿ ಬೆಳ್ಳಿ ಪದಕ ಪಡೆದರು. ವೈಯಕ್ತಿಕ ಟ್ರ್ಯಾಪ್ ಶೂಟಿಂಗ್‌ನಲ್ಲಿ ಕಿನಾನ್ ಚೆನೈಗೆ ಕಂಚು ಗೆಲ್ಲುವಲ್ಲಿ ಯಶಸ್ವಿಯಾದರು.
ಸಂಜೆ ವೇಳೆ ನಡೆದ ಕ್ರೀಡಾಕೂಟದಲ್ಲಿ ಅವಿನಾಶ್ ಸೇಬಲ್ 3000 ಮೀಟರ್ ಸ್ಟೀಪಲ್ ಚೇಸ್‌ನಲ್ಲಿ ಮತ್ತು ಪುರುಷರ ಶಾಟ್‌ಪುಟ್ (ಗುಂಡು ಎಸೆತ) ಸ್ಪರ್ಧೆಯಲ್ಲಿ ತಜಿಂದರ್‌ಪಾಲ್ ಸಿಂಗ್ ತೂರ್ ಚಿನ್ನದ ಪದಕ ಗೆದ್ದರು. ಅವಿನಾಶ್ 8 ನಿಮಿಷ 19 ಸೆಕೆಂಡ್ 54 ಕ್ಷಣಗಳಲ್ಲಿ 3000 ಮೀಟರ್ ಓಟವನ್ನು ಪೂರ್ಣಗೊಳಿಸಿ ಮೊಲದ ಸ್ಥಾನ ಪಡೆದರೆ, ತಜಿಂದರ್‌ಪಾಲ್ ಸಿಂಗ್ ತೂರ್ 7.26 ಕೆಜಿ ಕಬ್ಬಿಣದ ಗುಂಡನ್ನು 20.36 ಮೀ ದೂರಕ್ಕೆಸೆದು ಬಂಗಾರವನ್ನು ತಮ್ಮದಾಗಿಸಿಕೊಂಡರು.