ಭಾರತ ಪುರುಷರ ಕ್ರಿಕೆಟ್ ತಂಡವು ಮುಂಬರುವ ಜುಲೈ 12 ರಿಂದ ಆಗಸ್ಟ್ 13 ರವರೆಗೆ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ. ವಿಂಡೀಸ್ ವಿರುದ್ದ 2 ಟೆಸ್ಟ್, 3 ಏಕದಿನ, 5 ಟಿ-ಟ್ವಿಂಟಿ ಪಂದ್ಯಗಳ ಸರಣಿಯನ್ನು ಆಡಲಿದೆ. ಈ ಪ್ರವಾಸದ ವೇಳಾಪಟ್ಟಿಯನ್ನು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ (CWI) ಸೋಮವಾರ ಪ್ರಕಟಿಸಿದೆ. ಭಾರತವು ಈ ಹಿಂದೆ ಕೊನೆಯ ಬಾರಿಗೆ 2019ರಲ್ಲಿ ಎಲ್ಲಾ ಮಾದರಿಯ ಪ್ರವಾಸಕ್ಕಾಗಿ ವೆಸ್ಟ್ ಇಂಡೀಸ್‌ಗೆ ಪ್ರವಾಸ ಕೈಗೊಂಡಿತ್ತು. ಈ ಸಂದರ್ಭದಲ್ಲಿ ಮೂರು ಮಾದರಿಯಲ್ಲೂ ಕೆರಿಬಿಯನ್ನರನ್ನು ಮಣಿಸಿ ಸರಣಿ ಗೆದ್ದಿತ್ತು.
ಇದೀಗ ಟೀಮ್ ಇಂಡಿಯಾದ ವೆಸ್ಟ್ ಇಂಡೀಸ್ ಪ್ರವಾಸವು ಎರಡು ಟೆಸ್ಟ್‌ಗಳೊಂದಿಗೆ ಪ್ರಾರಂಭವಾಗಲಿದೆ. ಈಗಾಗಲೇ ನಿನ್ನೆ (ಭಾನುವಾರ) ಆಸ್ಟ್ರೇಲಿಯಾ ವಿರುದ್ದ ನೀರಸ ಪ್ರದರ್ಶನ ತೋರಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ನಲ್ಲಿ ಸೋತ ಭಾರತ ತಂಡಕ್ಕೆ ವಿಂಡೀಸ್ ಸವಾಲು ಎದುರಾಗಲಿದೆ. ಈ ಟೆಸ್ಟ್ ಸರಣಿಯ ಮೂಲಕ 2023-2025ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಭಿಯಾನ ಆರಂಭ ಆಗಲಿದೆ.
ಜುಲೈ 12ರಿಂದ 16 ರವರೆಗೆ ಡೊಮಿನಿಕಾದ ವಿಂಡ್ಸರ್ ಪಾರ್ಕ್ ಮೈದಾನದಲ್ಲಿ ವಿಂಡೀಸ್ ವಿರುದ್ಧ ಮೊದಲ ಟೆಸ್ಟ್ ಆಡಲಿರುವ ಟೀಮ್ ಇಂಡಿಯಾ, ನಂತರ ಜುಲೈ 20-24 ರವರೆಗೆ ಟ್ರಿನಿಡಾಡ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ಎರಡನೇ ಟೆಸ್ಟ್ನಲ್ಲಿ ಕಣಕ್ಕಿಳಿಯಲಿದೆ. ಈ ಎರಡನೇ ಟೆಸ್ಟ್ ಬಹಳ ವಿಶೇಷವಾಗಿದೆ. ಏಕೆಂದರೆ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 100ನೇ ಟೆಸ್ಟ್ ಪಂದ್ಯ ಇದಾಗಿದ್ದು, ಕ್ರಿಕೆಟ್ ಲೋಕದ ಇತಿಹಾಸಿಕ ದಿನವಾಗಲಿದೆ.