ಪ್ಯಾರಿಸ್:ಚೊಚ್ಚಲ ಫ್ರೆಂಚ್ ಓಪನ್ ಟೆನಿಸ್ ಗ್ರ್ಯಾನ್ಸ್ಲಾಂ ಜಯಿಸುವ ಗುರಿಯಲ್ಲಿದ್ದ ಜೆಕ್ ಗಣರಾಜ್ಯದ ಆಟಗಾರ್ತಿ ಕ್ಯಾರೋಲಿನಾ ಮುಕೋವಾ ಅವರನ್ನು ತೀವ್ರ ಹಣಾಹಣಿಯಲ್ಲಿ ಮಣಿಸಿದ ಪೋಲೆಂಡ್ ಆಟಗಾರ್ತಿ ಇಗಾ ಸ್ವಿಯಾಟೆಕ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ರೋಚಕ ಫೈನಲ್ ಗೆಲ್ಲುವ ಮೂಲಕ ಸತತ ಮೂರನೇ ಬಾರಿಗೆ ಫ್ರೆಂಚ್ ಓಪನ್ ಪ್ರಶಸ್ತಿ ಎತ್ತಿ ಹಿಡಿದರು. ಈ ಮೂಲಕ ಪ್ರತಿಷ್ಠಿತ ಟ್ರೋಫಿ ಗೆದ್ದ ಅತ್ಯಂತ ಕಿರಿಯ ಆಟಗಾರ್ತಿ (22 ವರ್ಷ) ಎಂಬ ಹೆಗ್ಗಳಿಕೆಯೂ ಅವರದ್ದಾಯಿತು.
ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಪೋಲೆಂಡ್ನ 22 ವರ್ಷದ ಟೆನಿಸ್ ತಾರೆ ಇಗಾ, ಕ್ಯಾರೋಲಿನಾ ಮುಕೋವಾ ವಿರುದ್ಧ 6-2, 5-7, 6-4 ಅಂತರದಿಂದ ಜಯ ಸಾಧಿಸಿದರು. ಈ ಮೂಲಕ 'ಪ್ಯಾರಿಸ್ ರಾಣಿ' ಪಟ್ಟದಲ್ಲಿ ಅವರು ಮುಂದುವರಿದರು. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಅಂತಿಮ ಸೆಣಸಾಟದಲ್ಲಿ ಉಭಯ ಆಟಗಾರ್ತಿಯರು ಕೆಚ್ಚೆದೆಯ ಪ್ರದರ್ಶನ ನೀಡಿದರು. ಮೊದಲ ಸೆಟ್ ಅನ್ನು ಇಗಾ ಜಯಿಸಿದರೆ, 2ನೇ ಸೆಟ್ನಲ್ಲಿ ಮುಕೋವಾ ತಿರುಗೇಟು ನೀಡಿದರು. ನಿರ್ಣಾಯಕ ಮೂರನೇ ಸೆಟ್ ಒಂದು ಹಂತದಲ್ಲಿ ಸಮಬಲದಲ್ಲಿ ಸಾಗಿದ್ದಾಗ ಪುಟಿದೆದ್ದ ಇಗಾ ಸ್ವಿಯಾಟೆಕ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ಈ ಮೂಲಕ ಸ್ವಿಯಾಟೆಕ್ 2005-07ರ ಬಳಿಕ ಇಲ್ಲಿ ಪ್ರಶಸ್ತಿ ಉಳಿಸಿಕೊಂಡ ಮೊದಲ ಆಟಗಾರ್ತಿ ಎಂಬ ಖ್ಯಾತಿಗೆ ಪಾತ್ರರಾದರು. ಈ ಹಿಂದೆ ಜಸ್ಟಿನ್ ಹೆನಿನ್ ಪ್ರಶಸ್ತಿಗಳ ಹ್ಯಾಟ್ರಿಕ್ ಸಾಧಿಸಿದ್ದರು.
ಪ್ರಶಸ್ತಿ ಗೆಲುವಿನೊಂದಿಗೆ ತಮ್ಮ ಮೊದಲ ನಾಲ್ಕೂ ಗ್ರ್ಯಾನ್‌ಸ್ಲಾಮ್ ಫೈನಲ್‌ಗಳನ್ನು ಗೆದ್ದ ವಿಶ್ವದ 3ನೇ ಆಟಗಾರ್ತಿ(3 ಫ್ರೆಂಚ್, 1 ಅಮೆರಿಕ ಓಪನ್) ಎಂಬ ದಾಖಲೆಗೆ ಇಗಾ ಪಾತ್ರರಾದರು. ಮೋನಿಕಾ ಸೆಲೆಸ್ ಮತ್ತು ನವೋಮಿ ಒಸಾಕಾ ಅವರು ಆಡಿದ ಮೊದಲ ನಾಲ್ಕು ಫೈನಲ್ಗಳಲ್ಲಿ ಗೆಲುವು ಸಾಧಿಸಿದ್ದರು.
ಹೀಗಿತ್ತು ಫೈನಲ್ ಕದನ:ಮೊದಲ ಸೆಟ್ ಆರಂಭದಲ್ಲಿ ಹಾಲಿ ಚಾಂಪಿಯನ್ ಇಗಾ 0-2 ಯಲ್ಲಿ ಹಿನ್ನಡೆಯಲ್ಲಿದ್ದರು. ನಿಖರ ಹೊಡೆತಗಳು ಕೈತಪ್ಪುತ್ತಿದ್ದವು. ಬಳಿಕ ತನ್ನೆಲ್ಲಾ ಸಾಮರ್ಥ್ಯ ಧಾರೆ ಎರೆದ ಆಟಗಾರ್ತಿ ಬಳಿಕ 6-2 ರಲ್ಲಿ ಮೊದಲ ಸೆಟ್ ಅನ್ನು ವಶಪಡಿಸಿಕೊಂಡರು. ಇದು ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಒಂದೂ ಸೆಟ್ ಸೋಲದೇ ಫೈನಲ್ಗೆ ಬಂದಿದ್ದ ಮುಕೋವಾಗೆ ಆಘಾತ ನೀಡಿತು.
ಇದಾದ ಬಳಿಕ 2 ನೇ ಸೆಟ್ ಮದಗಜಗಳ ಕಾದಾಟಕ್ಕೆ ಸಾಕ್ಷಿಯಂತಿತ್ತು. ಚೊಚ್ಚಲ ಪ್ರಶಸ್ತಿ ಗೆಲ್ಲಬೇಕೆಂಬ ಹಠದಲ್ಲಿದ್ದ ಕ್ಯಾರೋಲಿನಾ ಮುಕೋವಾ ಆರಂಭದಲ್ಲಿ 3-0 ಯಲ್ಲಿ ಹಿಂದಿದ್ದರೂ, ಪುಟಿದೆದ್ದು ಕೊನೆಯಲ್ಲಿ 5-7 ರ ಮುನ್ನಡೆ ಸಾಧಿಸಿ ಸೆಟ್ ವಶಪಡಿಸಿಕೊಂಡರು. ಇದರಿಂದ ಗೇಮ್ ನಿರ್ಣಾಯಕ ಮೂರನೇ ಸೆಟ್ಗೆ ಹೋಯಿತು.