ನವದೆಹಲಿ:2028ರಲ್ಲಿ ಲಾಸ್ ಏಂಜಲೀಸ್ನಲ್ಲಿ ನಡೆಯಲಿರುವ ಒಲಿಂಪಿಕ್ಸ್ಗೆ ಕ್ರಿಕೆಟ್ ಸೇರ್ಪಡೆ ಆಗಲಿದೆ ಎಂಬ ಬಗ್ಗೆ ಹಲವಾರು ಚರ್ಚೆಗಳು ನಡೆದಿದ್ದವು. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಈ ಬಗ್ಗೆ ಮಹತ್ವಾಕಾಂಕ್ಷೆಯನ್ನು ಹೊಂದಿತ್ತು. ಆದರೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ICC) ನೀಡಿರುವ ಮಾಹಿತಿಯಂತೆ ಒಲಂಪಿಕ್ಸ್ನಲ್ಲಿ ಕ್ರಿಕೆಟ್ ಸೇರ್ಪಡೆ ಇಲ್ಲ ಎನ್ನಲಾಗಿದೆ.
ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಲಾಸ್ ಏಂಜಲೀಸ್ 2028ರ ಒಲಿಂಪಿಕ್ಸ್‌ನಲ್ಲಿ ಕ್ರೀಡೆಯ ಸೇರ್ಪಡೆಯ ಬಗ್ಗೆ ಇನ್ನೂ ಭರವಸೆ ಹೊಂದಿದ್ದು, ಕ್ರೀಡಾಕೂಟದ ಸಂಘಟನಾ ಸಮಿತಿಗೆ ಪುರುಷರು ಮತ್ತು ಮಹಿಳೆಯರ ಆರು ತಂಡಗಳ ಟಿ20 ಪಂದ್ಯಾವಳಿಗಳನ್ನು ಶಿಫಾರಸು ಮಾಡಿದೆ. ಮಾರ್ಚ್ ವೇಳೆಗೆ ಒಲಿಂಪಿಕ್ಸ್ ಸಂಘಟಕರು ಹೊಸ ಕ್ರೀಡೆಗಳ ಪಟ್ಟಿಯನ್ನು ಅಂತಿಮಗೊಳಿಸಿದ ನಂತರ ಅಕ್ಟೋಬರ್‌ನಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಕ್ರಿಕೆಟ್‌ನ ಸೇರ್ಪಡೆಯ ಕುರಿತು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಿದೆ.
ಮುಂಬೈನಲ್ಲಿ ನಡೆಯುವ ಐಒಸಿಯ ಅಧಿವೇಶನದಲ್ಲಿ ಹೊಸ ಕ್ರೀಡೆಗಳ ಸೇರ್ಪಡೆ ಬಗ್ಗೆ ಅನುಮೋದಿಸಲಾಗುವುದು, ಇದು ಈ ವರ್ಷದ ಅಕ್ಟೋಬರ್‌ನಲ್ಲಿ ನಡೆಯುವ ನಿರೀಕ್ಷೆಯಿದೆ ಎಂದು ಐಸಿಸಿ ಹೇಳಿದೆ. ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ನೇತೃತ್ವದ ಐಸಿಸಿಯ ಒಲಿಂಪಿಕ್ಸ್ ವರ್ಕಿಂಗ್ ಗ್ರೂಪ್‌ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರನ್ನು ಸೇರಿಸಲಾಗಿದೆ. ಹಾಗೇ ಈ ಗುಂಪಿನಲ್ಲಿ ಇಂದ್ರ ನೂಯಿ (ಸ್ವತಂತ್ರ ನಿರ್ದೇಶಕರು) ಮತ್ತು ಪರಾಗ್ ಮರಾಠೆ (ಮಾಜಿ ಯುಎಸ್ಎ ಕ್ರಿಕೆಟ್ ಅಧ್ಯಕ್ಷರು) ಕೂಡ ಇದ್ದಾರೆ.
2036 ರಲ್ಲಿ ಒಲಿಂಪಿಕ್ಸ್ ಭಾರತದಲ್ಲಿ ಆಯೋಜನೆಗೊಳ್ಳಲಿದೆ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಜಯ್ ಶಾ ಅವರನ್ನು ಕಮಿಟಿಯಲ್ಲಿ ಸೇರಿಸಲಾಗಿದೆ. ಕ್ರೀಡೆಯ ಅತಿದೊಡ್ಡ ಜಾಗತಿಕ ಸಮಾರಂಭವಾದ ಒಲಂಪಿಕ್ನಲ್ಲಿ ಕ್ರಿಕೆಟ್ ಸೇರಿಸಲು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC) ಯೊಂದಿಗಿನ ಮಾತುಕತೆಗಳಲ್ಲಿ ಶಾ ಅವರು ಪ್ರಮುಖ ಪಾಲುದಾರರಾಗಲಿದ್ದಾರೆ ಎಂದು ಐಸಿಸಿ ಅಭಿಪ್ರಾಯಪಟ್ಟಿದೆ.