ಕೋಲ್ಕತ್ತಾ (ಪಶ್ಚಿಮ ಬಂಗಾಳ): ಫಿಡೆ ಚೆಸ್ ವಿಶ್ವಕಪ್ನಲ್ಲಿ ರನ್ನರ್ ಅಪ್ ಆದ ಭಾರತ ಯುವ ಚೆಸ್ ಚತುರ ಪ್ರಜ್ಞಾನಂದ ಅವರಿಗೆ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ. ಅಜೆರ್ಬೈಜಾನ್‌ನ ಬಾಕುವಿನಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿ ತವರಿಗೆ ಮರಳಿದ ಪ್ರಜ್ಞಾನಂದ ಮೊದಲು ತಮಿಳು ನಾಡಿನ ಮುಖ್ಯಮಂತ್ರಿಗಳನ್ನು ಭೇಟಿ ಆದರು. ನಂತರ ಪ್ರಧಾನಿ ಮೋದಿ, ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರನ್ನು ಪೋಷಕರ ಸಮೇತ ಭೇಟಿ ಮಾಡಿದರು.
ಭಾರತದ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಅವರು ಭಾರತ ಮುಂದಿನ ದಿನಗಳಲ್ಲಿ ಚೆಸ್ನ ಸುವರ್ಣ ಪೀಳಿಗೆಯನ್ನು ಕಾಣಲಿದೆ ಎಂದಿದ್ದರು. ಅದರಂತೆ ಇತ್ತೀಚೆಗೆ ಬಿಡುಗಡೆ ಆದ ಚೆಸ್ ಶ್ರೇಯಾಂಕದಲ್ಲಿ ಯುವ ಚೆಸ್ ಆಟಗಾರ ಗುಕೇಶ್ ವಿಶ್ವನಾಥ್ ಆನಂದ್ ಅವರನ್ನೇ ಹಿಂದಿಕ್ಕಿ ಭಾರತ ಅಗ್ರ ಚೆಸ್ ರ್‍ಯಾಂಕಿಂಗ್ ಆಟಗಾರ ಆಗಿ ಹೊರಹೊಮ್ಮಿದ್ದಾರೆ. ಪ್ರಜ್ಞಾನಂದ ಶ್ರೇಯಾಂಕದಲ್ಲಿ 19ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಚೆಸ್ ವಿಶ್ವಕಪ್ನಲ್ಲಿ ಭಾಗವಹಿಸಿದ ಯುವ ಪ್ರತಿಭೆ ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು, ಪ್ರಜ್ಞಾನಂದ ಅವರಿಗೆ ಪ್ರಧಾನಿ ಮೋದಿಯವರೊಂದಿಗೆ ನಡೆಸಿದ ಸಂಭಾಷಣೆಯ ಬಗ್ಗೆ ಪ್ರಶ್ನಿಸಲಾಯಿತು. "ಅವರು ನಮ್ಮೊಂದಿಗೆ ಸಾಮಾನ್ಯರಂತೆ ಮಾತನಾಡಿದರು. ಅವರು ನನ್ನ ತರಬೇತಿ ಮತ್ತು ನನ್ನ ಪಂದ್ಯಾವಳಿಯ ಬಗ್ಗೆ ಕೇಳಿದರು. ಪ್ರಧಾನಿ ಅವರನ್ನು ಭೇಟಿಯಾಗಲು ನನಗೆ ತುಂಬಾ ಸಂತೋಷವಾಗಿದೆ. ಅವರು ನನ್ನ ಪೋಷಕರ ಬಗ್ಗೆಯೂ ಕೇಳಿದರು, ನಾನು ಅವರೊಂದಿಗೆ ಸಂವಹನ ನಡೆಸುವುದನ್ನು ನಿಜವಾಗಿಯೂ ಆನಂದಿಸಿದೆ. ಅವರು ನನಗೆ ಕೆಲವು ಸಲಹೆಗಳನ್ನು ನೀಡಿದರು ಎಂದು "ಚೆಸ್ ಗ್ರ್ಯಾಂಡ್ ಮಾಸ್ಟರ್ ಹೇಳಿದರು.