ನವದೆಹಲಿ: ಭಾರತದ ಬಾಕ್ಸರ್ ವಿಜೇಂದರ್ ಸಿಂಗ್ ವೃತ್ತಿಪರ ಬಾಕ್ಸಿಂಗ್ಗೆ ಮತ್ತೆ ಮರಳಿದ್ದು, ಮುಂದಿನ ಪಂದ್ಯದಲ್ಲಿ ಅಮೆರಿಕದ ಮೈಕ್ ಸ್ನಿಡರ್ ವಿರುದ್ಧ ಕಣಕ್ಕಿಳಿಯಲಿದ್ದಾರೆ.
WBO ಒರಿಯಂಟಲ್ ಮತ್ತು ಏಷ್ಯಾ ಫೆಸಿಫಿಕ್ ಸೂಪರ್ ಮಿಡಲ್ವೈಟ್ ಚಾಂಪಿಯನ್ ವಿಜೇಂದರ್ ವೃತ್ತಿಪರ ಬಾಕ್ಸಿಂಗ್ನಲ್ಲಿ 10-0 ದಾಖಲೆ ಹೊಂದಿದ್ದಾರೆ. ಇದರಲ್ಲಿ 7 ನಾಕ್ಔಟ್ ಗೆಲುವು ಸೇರಿದೆ. ಇದೀಗ ಇವರು 8-ರೌಂಡ್ ಸೂಪರ್ ಮಿಡಲ್ವೈಟ್ ಚಾಂಪಿಯನ್ ಆಗಿರುವ ಮೈಕ್ ಸವಾಲನ್ನು ಇಂದು ಎದುರಿಸಲಿದ್ದಾರೆ.
ಎರಡು ವರ್ಷಗಳಿಂದ ರಿಂಗ್ಗೆ ಇಳಿಯದ ವಿಜೇಂದರ್ ರಾಜಕೀಯದಲ್ಲಿ ಕೆಲವು ಸಮಯ ಕಳೆದಿದ್ದರು. ಇದೇ ವರ್ಷ ನಡೆದ ಲೋಕಸಭೆಯಲ್ಲಿ ಸ್ಪರ್ಧಿಸಿ ಪರಾಜಯ ಕಂಡಿದ್ದರು. ಮತ್ತೆ ಬಾಕ್ಸಿಂಗ್ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಬಯಸಿದ್ದು, ಇದೇ ವರ್ಷ ಎರಡು ಅಥವಾ ಹೆಚ್ಚು ಪಂದ್ಯಗಳಲ್ಲಿ ಸ್ಪರ್ಧಿಸಿ ವಿಶ್ವಮಟ್ಟದ ಪ್ರಶಸ್ತಿ ಪಡೆಯುವ ಹಂಬಲ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸ್ನಿಡರ್ರನ್ನು ನಾಕೌಟ್ನಲ್ಲೇ ಮಣಿಸುವ ವಿಶ್ವಾಸದಲ್ಲಿದ್ದಾರೆ.
ಇನ್ನು ಮೈಕ್ ಸ್ನಿಡರ್ ಕೂಡ ವಿಜೇಂದರ್ ವಿರುದ್ಧ ರಿಂಗ್ನಲ್ಲಿ ಸೆಣಸಲು ಸಿದ್ಧವಾಗಿದ್ದು, ಹೆಚ್ಚು ಗೆಲುವು ಪಡೆದಿರುವ ಬಾಕ್ಸರ್ಗಳ ವಿರುದ್ಧ ತಾವು ಸ್ಪರ್ಧಿಸಲು ಇಷ್ಟಪಡುವುದಾಗಿ ಅವರು ತಿಳಿಸಿದ್ದಾರೆ. ವಿಜೇಂದರ್ರ ಹಲವು ಪಂದ್ಯಗಳನ್ನು ಹೀಗಾಗಲೇ ವೀಕ್ಷಿಸಿದ್ದು, ಅವರ ಬಲ ಮತ್ತು ದುರ್ಬಲ ನಡೆಗಳ ಬಗ್ಗೆ ಈಗಾಗಲೇ ಹಲವು ಯೋಜನೆ ರೂಪಿಸಿಕೊಂಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.