ದುಬೈ: ಪಿವಿ ಸಿಂಧು ಅವರು ಆಗಸ್ಟ್ 2022 ರಲ್ಲಿ ಎಡ ಪಾದದ ಮೇಲಿನ ಒತ್ತಡದ ಮುರಿತದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. 2023 ರಲ್ಲಿ ನೂರು ಪ್ರತಿಶತದಷ್ಟು ಮಾನಸಿಕ ಮತ್ತು ದೈಹಿಕವಾಗಿ ಸಿದ್ಧವಾಗಿದ್ದೇನೆ ಎಂದು ಹೇಳಿದ್ದಾರೆ. ಇಂದು ದುಬೈನಲ್ಲಿ ಆರಂಭವಾಗಲಿರುವ ಬ್ಯಾಡ್ಮಿಂಟನ್ ಏಷ್ಯಾ ಮಿಶ್ರ ಚಾಂಪಿಯನ್‌ಶಿಪ್‌ನಲ್ಲಿ ಸಿಂಧು ಭಾರತದ ಪರವಾಗಿ ತಮ್ಮ ಆಟವನ್ನು ಮುಂದುವರೆಸಲಿದ್ದಾರೆ.
ಕಳೆದ ವರ್ಷ ಸಿಂಧು ಅವರು ಸೈಯದ್ ಮೋದಿ ಇಂಟರ್‌ನ್ಯಾಶನಲ್, ಸ್ವಿಸ್ ಓಪನ್ ಮತ್ತು ಸಿಂಗಾಪುರ್ ಓಪನ್ ಪ್ರಶಸ್ತಿಗಳನ್ನು ಗೆದ್ದುಕೊಂಡರು. ಅಲ್ಲದೇ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಮಹಿಳೆಯರ ಸಿಂಗಲ್ಸ್ ಚಿನ್ನವನ್ನು ಗೆದ್ದರು, ಇದು ಅವರ ಮೊದಲ CWG ಪ್ರಶಸ್ತಿಯಾಗಿದೆ. ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ನ ಪ್ರಕಾರ ಪಿವಿ ಸಿಂಧು ಅವರ ಅತ್ಯುತ್ತಮ ವರ್ಲ್ಡ್ ಟೂರ್ ಸೀಸನ್ ಕಳೆದ ವರ್ಷದ್ದಾಗಿತ್ತು. ಆಗಸ್ಟ್‌ನಲ್ಲಿ ಸಿಂಧು ಅವರ ಎಡ ಪಾದದ ಮೇಲೆ ಒತ್ತಡ ಉಂಟಾದ ಕಾರಣ ಮುರಿತಕ್ಕೆ ಕಾರಣ ಆಗಿತ್ತು. ಇದರಿಂದ 5 ತಿಂಗಳ ಕಾಲ ಸ್ಪರ್ಧೆಗಳಿಂದ ಹೊರಗುಳಿದಿದ್ದರು. ಪ್ರಸ್ತುತ ಮಹಿಳಾ ಸಿಂಗಲ್ಸ್ ಆಟಗಾರರ ವಿಶ್ವ ರ್‍ಯಾಂಕಿಂಗ್‌ನಲ್ಲಿ ಒಂಬತ್ತನೇ ಸ್ಥಾನದಲ್ಲಿದ್ದಾರೆ.
"ನಾನು ಈಗ ಸಂಪೂರ್ಣವಾಗಿ ಚೆನ್ನಾಗಿದ್ದೇನೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ನಾನು ಸಂಪೂರ್ಣವಾಗಿ ಕ್ಷೇಮವಾಗಿದ್ದೇನೆ. ಗಾಯಗಳು ಆಗುವುದು ಕಾಮನ್, ಆದರೆ ನಿಮ್ಮ ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳುವುದು ಮತ್ತು ಪ್ರತಿ ಬಾರಿ ಬಲವಾಗಿ ಹಿಂತಿರುಗುವುದು ಮುಖ್ಯವಾಗಿದೆ. ನಾನು ಆತ್ಮವಿಶ್ವಾಸ, ಧನಾತ್ಮಕ ಮತ್ತು ನನ್ನ ತಪ್ಪುಗಳಿಂದ ಕಲಿಯುತ್ತಿದ್ದೇನೆ. ನನ್ನ ಹೆತ್ತವರು ಸಹ ಕ್ರೀಡಾಪಟುಗಳಾಗಿದ್ದರು. ಅವರು ನನಗೆ ನೀಡುವ ಬೆಂಬಲ ಮತ್ತು ಪ್ರೇರಣೆಯು ನನ್ನನ್ನು ಕಡಿಮೆ ಸಮಯದಲ್ಲಿ ಮತ್ತೆ ಕ್ರೀಡೆಯಲ್ಲಿ ಭಾಗವಹಿಸುವಂತೆ ಮಾಡಿದೆ" ಎಂದು ಸಿಂಧು ಹೇಳಿದರು.