ತೈಪೆ (ತೈವಾನ್): ತೈಪೆ ಓಪನ್ ಸೂಪರ್ 300 ಪಂದ್ಯಾವಳಿಯಲ್ಲಿ ಭಾರತದ ಹೆಚ್.ಎಸ್. ಪ್ರಣಯ್ ಪುರುಷರ ಸಿಂಗಲ್ಸ್ ಕ್ವಾರ್ಟರ್-ಫೈನಲ್‌ನಲ್ಲಿ ಸೋಲನುಭವಿಸಿದ್ದಾರೆ. ಇದರಿಂದಾಗಿ ಇಡೀ ಟೂರ್ನಿಯಿಂದ ಭಾರತ ಹೊರಬಿದ್ದಿದೆ. ಇಂದು (ಶುಕ್ರವಾರ) ನಡೆದ ಪಂದ್ಯದಲ್ಲಿ ಪುರುಷರ ಸಿಂಗಲ್ಸ್ ಕ್ವಾರ್ಟರ್-ಫೈನಲ್ ಸ್ಪರ್ಧೆಯಲ್ಲಿ ವಿಶ್ವ ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ ಒಂಬತ್ತನೇ ಸ್ಥಾನದಲ್ಲಿರುವ ಪ್ರಣಯ್ ಕ್ವಾರ್ಟರ್‌ನಲ್ಲಿ ಹಾಂಕಾಂಗ್‌ನ ವಿಶ್ವದ ನಂ.16 ರ್ಯಾಂಕ್ನ ಎನ್‌ಜಿ ಕಾ ಲಾಂಗ್ ಆಂಗಸ್ ವಿರುದ್ಧ 19-21, 8-21 ಅಂತರದಲ್ಲಿ ಸೋತರು.
ಗುರುವಾರ ರಾತ್ರಿ ನಡೆದಿದ್ದ ಪಂದ್ಯದಲ್ಲಿ ಪ್ರಣಯ್ ಇಂಡೋನೇಷ್ಯಾದ ಟಾಮಿ ಸುಗಿಯಾತೊ ಅವರನ್ನು 21-9, 21-17 ಗೇಮ್ನಿಂದ ಮಣಿಸಿ ಕ್ವಾರ್ಟರ್-ಫೈನಲ್ ಪ್ರವೇಶ ಪಡೆದಿದ್ದರು. ಇಂಡೋನೇಷ್ಯಾದ ಟಾಮಿ ಅವರಿಗೆ ಮೊದಲ ಗೇಮ್‌ನಲ್ಲಿ ಪ್ರತಿರೋಧವೊಡ್ಡಲು ಬಿಡದೇ ಗೆದ್ದರೆ ಎರಡನೇ ಸೆಟ್ನಲ್ಲಿ ಸಣ್ಣ ಅಂತರದಲ್ಲಿ ಗೆಲುವು ದಾಖಲಿಸಿದ್ದರು. ನೇರ ಎರಡು ಸೆಟ್ನಲ್ಲಿ ಸೋಲಿಸಿ ತೈಪೆ ಓಪನ್‌ನಲ್ಲಿ ಭರವಸೆ ಮೂಡಿಸಿದ್ದರು.
ಹಾಂಕಾಂಗ್‌ನ ಎದುರಾಳಿ ವಿರುದ್ಧ ಪ್ರಣಯ್ ಉತ್ತಮ ದಾಖಲೆಯನ್ನೇ ಹೊಂದಿದ್ದರು. ಅವರಿಬ್ಬರ ಮುಖಾಮುಖಿಯಲ್ಲಿ 6ರಲ್ಲಿ ಪ್ರಣಯ್ ಗೆದ್ದಿದ್ದರೆ 5ರಲ್ಲಿ ಆಂಗಸ್ ಗೆಲುವು ಸಾಧಿಸಿದ್ದರು. ಇಂದಿನ ಮುಖಾಮುಖಿಯಲ್ಲಿ ಸೋಲನುಭವಿಸಿದ ನಂತರ ಇಬ್ಬರು ಹೆಡ್-ಟು-ಹೆಡ್ನಲ್ಲಿ ಸಮಬಲ ಸಾಧಿಸಿದಂತಾಯಿತು. ಆದರೆ ಈ ವರ್ಷದ ತೈಪೆ ಓಪನ್ ಸ್ಪರ್ಧೆಯಲ್ಲಿ ಈ ಹಂತದವರೆಗೆ ಉಳಿದಿದ್ದ ಭಾರತ ಏಕೈಕ ಆಟಗಾರ ಪ್ರಣಯ್ ಆಗಿದ್ದರು. ಒಂದು ಪ್ರಶಸ್ತಿಯ ಕನಸು ಈ ಸೋಲಿನಿಂದ ಕಮರಿದೆ.
ಮುಖಾಮುಖಿಯ ಲೆಕ್ಕದಲ್ಲಿ ಇಬ್ಬರು ಹೆಚ್ಚೂಕಮ್ಮಿ ಸಮಬಲದ ಹೋರಾಟಗಾರರಾಗಿದ್ದರಿಂದ ಸ್ಪರ್ಧೆ ತೀವ್ರ ಪೈಪೋಟಿ ಹೊಂದಿತ್ತು. ಪ್ರಣಯ್ ತಮ್ಮ ಹೆಜ್ಜೆಗಳ ಮೇಲೆ ನಿಗಾ ಇರಿಸಿದ್ದರಿಂದ 5-2 ಮುನ್ನಡೆಯೊಂದು ಪಂದ್ಯದಲ್ಲಿ ಉತ್ತಮ ಆರಂಭ ಪಡೆದುಕೊಂಡರು. ಆಂಗಸ್ ಈ ಅಂತರವನ್ನು ಹೆಚ್ಚು ಹೊತ್ತು ಬಿಟ್ಟುಕೊಡದೇ ಸಮಬಲ ಸಾಧಿಸಿದರು. ಇಬ್ಬರ ಹೋರಾಟ ಸಮಬಲದಲ್ಲೇ 19-19 ಅಂಕದವರೆಗೆ ಸಾಗಿತ್ತು. ಕೊನೆಯ ಹಂತದ ವೇಳೆ ಆಂಗಸ್ ಸತತ ಎರಡು ಅಂಕವನ್ನು ಪಡೆದು ಮೊದಲ ಸೆಟ್ ವಶಪಡಿಸಿಕೊಂಡರು.