ಕಟಕ್ (ಒಡಿಶಾ):ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ ವತಿಯಿಂದ ಆಯೋಜನೆ ಗೊಂಡಿರುವ 15ನೇ ಆವೃತ್ತಿಯ ಹಾಕಿ ವಿಶ್ವಕಪ್ಗೆ ಇಂದು ಅದ್ಧೂರಿ ಚಾಲನೆ ದೊರೆತಿದೆ. ಒಡಿಶಾದ ಕಟಕ್ನ ಬಾರಾಬತಿ ಕ್ರಿಡಾಂಗಣದಲ್ಲಿ ಮಹಾಕುಂಭದ ಉದ್ಘಾಟನಾ ಸಮಾರಂಭ ನಡೆದಿದ್ದು, ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅವರು ಹಾಕಿ ವಿಶ್ವಕಪ್ 2023 ಉದ್ಘಾಟಿಸಿದರು. ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ಉಪಸ್ಥಿತರಿದ್ದರು.
ಸಂಜೆ 6 ರಿಂದ ಬಾಲಿವುಡ್ ತಾರೆಯರಿಂದ ಕಾರ್ಯಕ್ರಮ ಮೆರುಗು ಕಟ್ಟಿತ್ತು 42,000 ಜನ ಪ್ರೇಕ್ಷಕರಿಂದ ಬಾರಾಬತಿ ಕ್ರೀಡಾಂಗಣ ತುಂಬಿತ್ತು. ಒಡಿಶಾದ ಕಟಕ್ನಲ್ಲಿ ಹಾಕಿ ವಿಶ್ವಕಪ್ ಕಾವೇರಿದೆ. ವಿಶ್ವಕಪ್ ಟ್ರೋಫಿಯ ಮೆರವಣಿಗೆ ನಂತರ ಕ್ರಿಡಾಂಗಣದಲ್ಲಿ ಅನಾವರಣ ಮಾಡಲಾಯಿತು. ಒಡಿಶಾ ರಾಜ್ಯಾದ್ಯಂತ ಹಾಕಿ ಜ್ವರ ಏರಿದೆ ಎಂದರೆ ತಪ್ಪಾಗಲಾರದು. ನಗರದ ಕೆಲವು ಪ್ರಮುಖ ಪ್ರದೇಶದಲ್ಲಿ ಟ್ರೋಫಿಯನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಸಂಜೆ 6 ಒಳಗೆ ಬರಾಬತಿ ಕ್ರಿಡಾಂಗಣಕ್ಕೆ ಟ್ರೋಫಿ ತಲುಪಲಿದೆ. ಈ ವಿಶ್ವಕಪ್ ಹಿನ್ನೆಲೆಯಲ್ಲಿ ವಿಶ್ವದ ನಾಲ್ಕನೇ ಬೃಹತ್ ಕ್ರೀಡಾಂಗಣ ಒಡಿಶಾದಲ್ಲಿ ಜನವರಿ 5ರಂದು ಉದ್ಘಾಟನೆ ಆಗಿದ್ದು, ಅದಕ್ಕೆ ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಹೆಸರನ್ನು ಇಡಲಾಗಿದೆ.
ಬಾರಾಬತಿ ಕ್ರೀಡಾಂಗಣದಲ್ಲಿ ಸಕಲ ಸಿದ್ಧತೆ:6 ಗಂಟೆಗಳ ಕಾಲ ನಡೆಯಲಿರುವ ಮನರಂಜನಾ ಕಾರ್ಯಕ್ರಮಕ್ಕೆ ಜನರು ಆಗಮಿಸುತ್ತಿದ್ದಾರೆ. 42 ಸಾವಿರ ಪ್ರೇಕ್ಷಕರನ್ನು ಕುಳಿತು ನೋಡುವ ಸಾಮರ್ಥ್ಯ ಬಾರಾಬತಿ ಕ್ರೀಡಾಂಗಣಕ್ಕಿದೆ. ಪಾರ್ಕಿಂಗ್ ಮತ್ತು ವಾಹನ ದಟ್ಟಣೆ ತಪ್ಪಿಸುವಲ್ಲಿ ಸಂಚಾರಿ ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲಾಡಳಿತದಿಂದ ಸಕಲ ವ್ಯವಸ್ಥೆ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
ಸರ್ಕಾರಿ ಮತ್ತು ಖಾಸಗಿ ಕಚೇರಿಗಳಿಗೆ ರಜೆ:ಜಿಲ್ಲಾಡಳಿತ ನಿನ್ನೆಯೇ ಇಂದು ಮಧ್ಯಹ್ನದ ನಂತರ ಶಾಲಾ ಕಾಲೇಜು ಮತ್ತು ಸರ್ಕಾರಿ ಕಚೇರಿ ರಜೆ ಘೋಷಣೆ ಮಾಡಿತ್ತು. ವಿಶ್ವಕಪ್ ಹಿನ್ನೆಲೆಯಲ್ಲಿ ಉದ್ಘಾಟನಾ ಸಮಾರಂಭದ ಹಿನ್ನೆಲೆಯಲ್ಲಿ ಖಾಸಗಿ ಕಂಪನಿಗಳೂ ರಜೆ ಘೊಷಿಸಿವೆ. ಇಂದಿನ ಕಾರ್ಯಕ್ರಮಕ್ಕೆ ಟಿಕೆಟ್ ಹೊಂದಿರುವವರಿಗೆ ನಗರದಿಂದ ಕ್ರೀಡಾಂಗಣಕ್ಕೆ ಬರಲು ಉಚಿತ ಬಸ್ ವ್ಯವಸ್ಥೆಯನ್ನೂ ಜಿಲ್ಲಾಡಳಿತ ಮಾಡಿದೆ. ಅಲ್ಲದೇ ಜಿಲ್ಲಾಡಳಿತದ ವತಿಯಿಂದ ಉಪಹಾರ ಮತ್ತು ನೀರಿನ ವ್ಯವಸ್ಥೆಯೂ ಇರಲಿದ್ದು, ನೀರಿನ ಬಾಟಲಿಯನ್ನು ತರುವುದು ಬೇಡ ಎಂದು ತಿಳಿಸಲಾಗಿದೆ.
ಟಿಕೆಟ್ಗಳು ಸೋಲ್ಡೌಟ್:ನಾಡಿದ್ದಿನಿಂದ ಆರಂಭವಾಗಲಿರುವ 15ನೇ ಆವೃತ್ತಿಯ ಹಾಕಿ ವಿಶ್ವಕಪ್ನ ಪಂದ್ಯಗಳ ಬಹುತೇಕ ಟಿಕೆಟ್ಗಳು ಮಾರಾಟವಾಗಿದೆ. ರೂರ್ಕೆಕಾದ ನೂತನ ಬಿರ್ಸಾ ಮುಂಡಾ ಕ್ರೀಡಾಂಗಣ ಮತ್ತು ಭುವನೇಶ್ವದ ಸ್ಟೇಡಿಯಂನಲ್ಲಿ ಎಲ್ಲ ಪಂದ್ಯಗಳನ್ನು ಆಯೊಜಿಸಲಾಗಿದೆ. ಭಾರತ ಆಡಲಿರುವ ಪಂದ್ಯಗಳ ಟಿಕೆಟ್ಗಳು ಸಂಪೂರ್ಣ ಮಾರಾಟ ಆಗಿದೆ ಎಂದು ಹಾಕಿ ಇಂಡಿಯಾ ಮಾಹಿತಿ ನೀಡಿದೆ. 16 ತಂಡಗಳನ್ನು ನಾಲ್ಕು ಗುಂಪುಗಳನ್ನಾಗಿ ಮಾಡಲಾಗಿದ್ದು ಭಾರತ ಡಿ ಗುಂಪಿನಲ್ಲಿದೆ. ಭಾರತ ಜನವರಿ 13 ರಂದು ಉದ್ಘಾಟನಾ ಪಂದ್ಯ ಸ್ಪೇನ್ ವಿರುದ್ಧ ನಡೆಯಲಿದೆ ಮತ್ತು ಜನವರಿ 15 ಇಂಗ್ಲೆಂಡ್ ವಿರುದ್ಧ ಇರಲಿದ್ದು, ಎರಡೂ ಪಂದ್ಯಗಳು ನೂತನವಾಗಿ ಉದ್ಘಾಟನೆ ಆದ ಬಿರ್ಸಾ ಮುಂಡಾ ಕ್ರೀಡಾಂಗಣದಲ್ಲಿ ನಡೆಯಲಿದೆ.
ಜನವರಿ 19ರಂದು ಭುವನೇಶ್ವರದಲ್ಲಿ ಭಾರತ ವೇಲ್ಸ್ನೊಂದಿಗೆ ಆಡಲಿದ್ದು, ಈ ಪಂದ್ಯ ಟಿಕೆಟ್ಸೋಲ್ಡೌಟ್ ಆಗಿದೆ. ಇದರ ಜೊತೆಗೆ ಇತರೆ ಪಂದ್ಯಗಳ ಟಿಕೆಟ್ಗೂ ಬಹು ಬೇಡಿಕೆಗಳು ವ್ಯಕ್ತವಾಗಿದೆ. ಈಗಾಗಲೇ ಬಿರ್ಸಾ ಮುಂಡಾ ಸ್ಟೇಡಿಯಂನ ಎಲ್ಲಾ ಪಂದ್ಯಗಳ ಟಿಕೆಟ್ ಮಾರಾಟಕ್ಕಿಟ್ಟಿದ್ದು ಕೆಲವೇ ದಿನಗಳಲ್ಲಿ ಸೋಲ್ಡೌಟ್ ಆಗಿದೆ ಎಂದು ಹಾಕಿ ಇಂಡಿಯಾ ತಿಳಿಸಿದೆ.
ಇದನ್ನೂ ಓದಿ:ನಾಳೆ ಹಾಕಿ ವಿಶ್ವಕಪ್ ಅನಾವರಣ: ಬಾರಾಬತಿ ಕ್ರೀಡಾಂಗಣದಿಂದ ಅದ್ಧೂರಿ ಚಾಲನೆ