ಭುವನೇಶ್ವರ(ಒಡಿಶಾ): ಡಿ ಗುಂಪಿನಲ್ಲಿ ಎರನೇ ಸ್ಥಾನ ಗಳಿಸಿದ ಭಾರತ ಇಂದು ನ್ಯೂಜಿಲೆಂಡ್ ವಿರುದ್ಧ ಕ್ರಾಸ್ ಓವರ್ ಪಂದ್ಯದಲ್ಲಿ ಗೆದ್ದರೆ ಮಾತ್ರ ಎಂಟರ ಗಟ್ಟಕ್ಕೆ ಪ್ರವೇಶ ಪಡೆಯಲಿದೆ. ಇಂದಿನ ಪ್ರಿ ಕ್ವಾರ್ಟರ್ ಫೈನಲ್ನಲ್ಲಿ ಕಿವೀಸನ್ನು ಸೋಲಿಸಿದರೆ ಕ್ವಾರ್ಟರ್ ಫೈನಲ್ನಲ್ಲಿ ಹಾಲಿ ಚಾಂಪಿಯನ್ ಬೆಲ್ಜಿಯಂ ಎದುರಾಗಲಿದೆ. ಇಂದಿನ ಪಂದ್ಯದಲ್ಲಿ ಸೋಲನುಭವಿಸಿದ ತಂಡ ಪ್ರಶಸ್ತಿ ಸ್ಪರ್ಧೆಯಿಂದ ಹೊರ ಬೀಳಲಿದೆ.
ಚೊಚ್ಚಲ ಬಾರಿಗೆ ವಿಶ್ವಕಪ್ನಲ್ಲಿ ಭಾಗವಹಿಸಿದ್ದ ವೇಲ್ಸ್ ಎದುರು ಭಾರತ ನೀಡಿದ ಸಾಧಾರಣ ಪ್ರದರ್ಶನದಿಂದಾಗಿ ನೇರ ಎಂಟರ ಘಟ್ಟದ ಪ್ರವೇಶವನ್ನು ಕಳೆದು ಕೊಂಡಿತು. ಕಳೆದ ಗ್ರೂಪ್ ಪಂದ್ಯಗಳಲ್ಲಿ ಇಂಗ್ಲೆಂಡ್ ವಿರುದ್ಧ ಸಮಬಲದ ಸಾಧನೆ ಮಾಡಿದೆ. ಫಿಟ್ ಆಗಿರುವ ತಂಡಕ್ಕೆ ಗೆಲುವಿನ ಅಂಶ ಹೆಚ್ಚಿದೆ. ನ್ಯೂಜಿಲೆಂಡ್ ಎದುರಿನ ಹೆಡ್ ಟು ಹೆಡ್ ಪಂದ್ಯದಲ್ಲಿ ಭಾರತ ಸಾರ್ವಭೌಮವಾಗಿ ಕಾಣುತ್ತಿದೆ.
ಭಾರತ ಮತ್ತು ಕಿವೀಸ್ ನಡುವೆ 104 ಪಂದ್ಯಗಳು ನಡೆದಿದೆ. ಇದರಲ್ಲಿ ಭಾರತ 58 ರಲ್ಲಿ, ನ್ಯೂಜಿಲೆಂಡ್ 29 ರಲ್ಲಿ ಗೆದ್ದಿದೆ. ಉಳಿದಂತೆ 17 ಪಂದ್ಯಗಳು ಡ್ರಾದಲ್ಲಿ ಅಂತ್ಯವಾಗಿವೆ. ಕೊನೆಯ ಐದು ಮುಖಾಮುಖಿಯ ಅಂಕಿ ಅಂಶದಲ್ಲೂ ಭಾರತ ಉತ್ತಮ ಪ್ರದರ್ಶನ ನೀಡಿದೆ. 4ರಲ್ಲಿ ಗೆದ್ದಿರುವ ಬ್ಲೂ ಬಾಯ್ಸ್ ಒಂದನ್ನು ಕಿವಿಸ್ಗೆ ಬಿಟ್ಟುಕೊಟ್ಟಿದ್ದಾರೆ. ಇನ್ನು, ಈವರೆಗೆ ವಿಶ್ವ ಕಪ್ನಲ್ಲಿ 6 ಬಾರಿ ಉಭಯ ತಂಡಗಳು ಎದುರಾಗಿದ್ದು, ನಾಲ್ಕರಲ್ಲಿ ಭಾರತ ಮತ್ತು ಎರಡರಲ್ಲಿ ನ್ಯೂಜಿಲೆಂಡ್ ಗೆದ್ದಿದೆ. ಅಂಕಿ ಅಂಶಗಳ ಪ್ರಕಾರ ಭಾರತ ಗೆಲ್ಲುವ ಫೇವ್ರೇಟ್ ಆಗಿದೆ.
ಸಿ ಗುಂಪಿನಲ್ಲಿದ್ದ ಕಿವೀಸ್ 1 ಗೆಲುವು ಮತ್ತು ಎರಡು ಸೋಲಿನಿಂದ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿತ್ತು. ಸದ್ಯ ವಿಶ್ವರ್ಯಾಂಕಿಂಗ್ನ 12ನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ವಿರುದ್ಧ 6ನೇ ಶ್ರೇಯಾಂಕದಲ್ಲಿರುವ ಭಾರತ ಸೆಣಸುತ್ತಿದೆ. ಈ ವರೆಗಿನ ವಿಶ್ವಕಪ್ ಪಂದ್ಯಗಳಲ್ಲಿ ಅಸಾಧಾರಣ ಪ್ರದರ್ಶನ ನೀಡಿರದ ಕಿವೀಸ್ ಈ ಬಾರಿಯೂ ಗುಂಪು ಪಂದ್ಯಗಳಲ್ಲಿ ಹೇಳುವಂತಹ ಆಟ ನೀಡಿಲ್ಲ. ಅಂಕಿ ಅಂಶ ಮತ್ತು ಕಿವೀಸ್ನ ಪ್ರದರ್ಶನದ ಪ್ರಕಾರ ಇಂದು ಭಾರತಕ್ಕೆ ಗೆಲುವಿನ ರೇಟಿಂಗ್ ಜಾಸ್ತಿ ಇದೆ.