ಭುವನೇಶ್ವರ(ಒಡಿಶಾ):ಕ್ವಾರ್ಟರ್ಫೈನಲ್ ತಲುಪಲು ಗೆಲ್ಲಲೇಬೇಕಿದ್ದ ಮಹತ್ವದ ಪಂದ್ಯದಲ್ಲಿ ಭಾರತ, ವೇಲ್ಸ್ ವಿರುದ್ಧ 4-2 ರಲ್ಲಿ ಜಯ ಸಾಧಿಸಿದೆ. ಗುಂಪಿನಲ್ಲಿ ಎರಡನೇ ಸ್ಥಾನ ಪಡೆದ ಟೀಂ ಇಂಡಿಯಾ ಕ್ರಾಸ್ ಓವರ್ ಮೂಲಕ ಕ್ವಾರ್ಟರ್ಗೆ ಲಗ್ಗೆ ಇಡಬೇಕಿದೆ. ಕಳೆದ ಪಂದ್ಯದಲ್ಲಿ ಅಂಕ ರಹಿತ ಡ್ರಾ ಸಾಧಿಸಿದ್ದ ಭಾರತ ಈ ಪಂದ್ಯದಲ್ಲಿ ದೊಡ್ಡ ಗೆಲುವಿನ ಅಗತ್ಯವಿತ್ತು. ಆದರೆ, 4-2 ರಲ್ಲಿ ವೇಲ್ಸ್ ಮಣಿಸಿತಾದರೂ ಕ್ವಾರ್ಟರ್ ಫೈನಲ್ಗೆ ಟಿಕೆಟ್ ಖಚಿತವಾಗಲಿಲ್ಲ.
ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಉಭಯ ತಂಡಗಳು ಮೊದಲ ಕ್ವಾರ್ಟರ್ನಲ್ಲಿ ಯಾವುದೇ ಗೋಲು ದಾಖಲಿಸಲಿಲ್ಲ. 22 ನೇ ನಿಮಿಷದಲ್ಲಿ ಸಂಶೇರ್ ಸಿಂಗ್ ರಿಬೌಂಡ್ ಮೂಲಕ ಗೋಲು ಗಳಿಸಿ ಭಾರತಕ್ಕೆ 1-0 ಮುನ್ನಡೆ ತಂದು ಕೊಟ್ಟರು. 32 ನೇ ನಿಮಿಷದಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡ ಭಾರತದ ಅಕ್ಷದೀಪ್ ಸಿಂಗ್ ಅದ್ಭುತ ಗೋಲು ಗಳಿಸಿದರು. ಈ ಮೂಲಕ ಭಾರತ 2-0 ಮುನ್ನೆ ಪಡೆಯಿತು.
ದೊಡ್ಡ ಗೆಲುವಿನ ಅಂತರದ ನಿರೀಕ್ಷೆತಲ್ಲಿದ್ದ ಭಾರತಕ್ಕೆ ವೇಲ್ಸ್ 43 ನೇ ನಿಮಿಷದಲ್ಲಿ ತಿರುಗೇಟು ನೀಡಿತು. ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಮಾಡಿದ ವೇಲ್ಸ್ 2-1 ಹಿನ್ನಡೆ ತಗ್ಗಿಸಿತು. 44 ನೇ ನಿಮಿಷದಲ್ಲಿ ಮತ್ತೊಂದು ಪೆನಾಲ್ಟಿಯನ್ನು ಗೋಲು ಬಾರಿಸಿ 2-2 ರಲ್ಲಿ ಸಮಬಲ ಸಾಧಿಸಿತು. ನಾಲ್ಕನೇ ಅವಧಿಯಲ್ಲಿ ಸಿಡಿದ ಭಾರತದ ಅಕ್ಷದೀಪ್ ಮತ್ತೊಂದು ಗೋಲು ಬಾರಿ 3-2 ಮುನ್ನಡೆ ಸಿಗುವಂತೆ ಮಾಡಿದರು. ಬಳಿಕ ಕೊನೆಯಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಹರ್ಮನ್ಪ್ರೀತ್ ಗೋಲಾಗಿಸಿ 4-2 ರಲ್ಲಿ ಪಂದ್ಯ ಗೆಲ್ಲಿಸಿದರು.
ಈ ಗೆಲುವಿನೊಂದಿಗೆ ಟೀಂ ಇಂಡಿಯಾ ವಿಶ್ವಕಪ್ನ ಡಿ ಗುಂಪಿನಲ್ಲಿ 7 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಕ್ವಾರ್ಟರ್ ಫೈನಲ್ ಟಿಕೆಟ್ಗಾಗಿ ಮೆನ್ ಇನ್ ಬ್ಲೂ ಪಡೆ ನ್ಯೂಜಿಲ್ಯಾಂಡ್ ಎದುರು ಕ್ರಾಸ್ ಓವರ್ ಪಂದ್ಯವನ್ನು ಆಡಬೇಕಿದೆ. ಪಂದ್ಯ ಜನವರಿ 22 ರಂದು ನಡೆಯಲಿದೆ.
ಮಲೇಷ್ಯಾಗೆ ಜಯ:ಇನ್ನೊಂದು ಪಂದ್ಯದಲ್ಲಿ ಮಲೇಷ್ಯಾ, ಪ್ರಬಲ ನ್ಯೂಜಿಲೆಂಡ್ ತಂಡವನ್ನು ಸೋಲಿಸಿತು. ಮಲೇಷ್ಯಾ 3-2 ಗೋಲುಗಳಿಂದ ಗೆಲುವು ಸಾಧಿಸಿತು. ವಿಶ್ವಕಪ್ನಲ್ಲಿ ಮಲೇಷ್ಯಾ ಎರಡನೇ ಗೆಲುವಿನೊಂದಿಗೆ ಸಿ ಗುಂಪಿನಲ್ಲಿ 6 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆಯಿತು.