ರೂರ್ಕೆಲಾ, ಒಡಿಶಾ:ಎಫ್‌ಐಎಚ್ ಪುರುಷರ ಹಾಕಿ ವಿಶ್ವಕಪ್ 2023 ರಲ್ಲಿ ಫ್ರಾನ್ಸ್‌ನೊಂದಿಗೆ ರೋಮಾಂಚಕ 5-5 ಡ್ರಾ ಸಾಧಿಸಿದ ನಂತರ ಅರ್ಜೆಂಟೀನಾ ಪೂಲ್ ಎ ನಲ್ಲಿ ಎರಡನೇ ಸ್ಥಾನ ಗಳಿಸಿದೆ. ಬಿರ್ಸಾ ಮುಂಡಾ ಅಂತರಾಷ್ಟ್ರೀಯ ಹಾಕಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯವನ್ನು ಗೆಲ್ಲುವ ಮೂಲಕ ಫ್ರಾನ್ಸ್ ಪೂಲ್-ಎಯಲ್ಲಿ ಎರಡನೇ ಸ್ಥಾನವನ್ನು ಖಚಿತಪಡಿಸಿಕೊಳ್ಳಬಹುದಿತ್ತು.
ಫ್ರಾನ್ಸ್ ಕೊನೆಯ ನಿಮಿಷದಲ್ಲಿ ಎಟಿಯೆನ್ನೆ ಟೈನೆವೆಜ್ (10ನೇ) ಮತ್ತು ವಿಕ್ಟರ್ ಚಾರ್ಲೆಟ್ (35, 37, 48, 59ನೇ) ನಾಲ್ಕು ಗೋಲುಗಳ ಮೂಲಕ 5-4 ಮುನ್ನಡೆ ಸಾಧಿಸಿತು. ಆದರೆ 60ನೇ ನಿಮಿಷದಲ್ಲಿ ನಿಕೋಲಸ್ ಡೆಲ್ಲಾ ಟಾರ್ ಪೆನಾಲ್ಟಿ ಕಾರ್ನರ್ ಅನ್ನು ಗೋಲ್ ಆಗಿ ಪರಿವರ್ತಿಸಿದರು. ಗೋಲು ಗಳಿಸುವ ಮೂಲಕ ಅವರ ನಿರೀಕ್ಷೆಯನ್ನು ಹುಸಿಗೊಳಿಸಿದರು.
ಅರ್ಜೆಂಟೀನಾ ಮೂರು ಪಂದ್ಯಗಳಲ್ಲಿ ಎರಡು ಗೆಲುವು ಮತ್ತು ಒಂದು ಡ್ರಾದೊಂದಿಗೆ ಪೂಲ್ ಎ ನಲ್ಲಿ ಎರಡನೇ ಸ್ಥಾನ ಗಳಿಸಿದರೆ, ಫ್ರಾನ್ಸ್ ಒಂದು ಗೆಲುವು, ಒಂದು ಸೋಲು ಮತ್ತು ಒಂದು ಡ್ರಾದೊಂದಿಗೆ ಮೂರನೇ ಸ್ಥಾನ ಗಳಿಸಿತು. ತನ್ನ ಹಿಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಡ್ರಾ ಮಾಡಿಕೊಂಡಿದ್ದ ಅರ್ಜೆಂಟೀನಾ ಫ್ರಾನ್ಸ್ ವಿರುದ್ಧ ಎರಡನೇ ನಿಮಿಷದಲ್ಲಿ ಗೋಲು ದಾಖಲಿಸಿ ಪಂದ್ಯ ಆರಂಭಿಸಿತು. ಫ್ರಾನ್ಸ್ ಕೂಡ ಆಕ್ರಮಣಶೀಲತೆ ಆಟವನ್ನು ಮುಂದುವರಿಸಿತ್ತು. ತನ್ನ 100 ನೇ ಅಂತಾರಾಷ್ಟ್ರೀಯ ಪಂದ್ಯವನ್ನು ಆಡುತ್ತಿರುವ ಎಟಿಯೆನ್ ಬ್ಲೇಸ್ ರೋಗ್ ಅವರ ಸಹಾಯದಿಂದ ಫ್ರಾನ್ಸ್ ತಂಡ ತನ್ನ ಮೊದಲನೇ ಗೋಲು ಗಳಿಸಿತು.
ಸ್ಕೋರ್ 1-1 ರಲ್ಲಿ ಸಮನಾಗಿ, ಎರಡನೇ ಕ್ವಾರ್ಟರ್‌ನಲ್ಲಿ ಎರಡೂ ತಂಡಗಳು ತಲಾ ಒಂದು ಪೆನಾಲ್ಟಿ ಕಾರ್ನರ್ ಗಳಿಸಿದವು. ಆದರೂ ಎರಡೂ ತಂಡಗಳು ಅದನ್ನು ಲಾಭ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ದ್ವಿತೀಯಾರ್ಧದಲ್ಲಿ ವಿಕ್ಟರ್ ಮತ್ತು ನಿಕೋಲಸ್ ಗಳಿಸಿದ ಗೋಲುಗಳು ಪಂದ್ಯದ ರೋಚಕತೆಯನ್ನು ಇಮ್ಮಡಿಗೊಳಿಸಿದವು. ನಿಕೋಲಸ್ 33ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಗೋಲು ಗಳಿಸಿದರೆ, ವಿಕ್ಟರ್ 35ನೇ ನಿಮಿಷದಲ್ಲಿ ಪೆನಾಲ್ಟಿ ಸ್ಟ್ರೋಕ್ ಗಳಿಸಿದರು. ಎರಡು ನಿಮಿಷಗಳ ನಂತರ ವಿಕ್ಟರ್ ಮತ್ತೊಂದು ಗೋಲು ಗಳಿಸಿದ್ದರಿಂದ ಫ್ರಾನ್ಸ್ ತಂಡ 3-2 ರಿಂದ ಮುನ್ನಡೆ ಪಡೆಯಿತು. ಪಂದ್ಯದ 41 ನೇ ನಿಮಿಷದಲ್ಲಿ ನಿಕೋಲ್ಸ್ ಪೆನಾಲ್ಟಿ ಗೋಲು ಗಳಿಸಿದರು ಮತ್ತು ಮೂರನೇ ಕ್ವಾರ್ಟರ್ ಅಂತ್ಯದ ವೇಳೆಗೆ ಎರಡೂ ತಂಡಗಳು 3-3 ರಲ್ಲಿ ಸಮಬಲ ಸಾಧಿಸಿದವು.