ಭುವನೇಶ್ವರ (ಒಡಿಶಾ):ಭಾರತದಲ್ಲಿ ನಡೆದ ಹಾಕಿ ವಿಶ್ವಕಪ್‌ನಲ್ಲಿ ಪುರುಷರ ತಂಡ ಕಳಪೆ ಪ್ರದರ್ಶನ ನೀಡಿದ್ದು, ಮುಖ್ಯ ತರಬೇತುದಾರ ಗ್ರಹಾಂ ರೀಡ್ ರಾಜೀನಾಮೆ ನೀಡಿದ್ದಾರೆ. ವಿಶ್ವಕಪ್ ಮುಗಿದ ಒಂದು ದಿನದ ಬಳಿಕ ಗ್ರಹಾಂ ರೀಡ್ ತಮ್ಮ ಹುದ್ದೆಯಿಂದ ಹಿಂದೆ ಸರಿದಿದ್ದಾರೆ. ಮುಂದಿನ ವರ್ಷ ಪ್ಯಾರಿಸ್ ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಸಬೇಕಿದ್ದ ಹೊತ್ತಲ್ಲೇ ರಾಜೀನಾಮೆ ನೀಡಿರುವುದು ಮಹತ್ವ ಪಡೆದುಕೊಂಡಿದೆ.
ಇದಲ್ಲದೇ, ವಿಶ್ಲೇಷಣಾತ್ಮಕ ತರಬೇತುದಾರ ಗ್ರೆಗ್ ಕ್ಲಾರ್ಕ್ ಮತ್ತು ವೈಜ್ಞಾನಿಕ ಸಲಹೆಗಾರ ಮಿಚೆಲ್ ಡೇವಿಡ್ ಪೆಂಬರ್ಟನ್ ಕೂಡ ತಮ್ಮ ಹುದ್ದಗೆ ರಾಜೀನಾಮೆ ಸಲ್ಲಿಸಿದ್ದಾರೆ. ಮೂವರೂ ಮುಂದಿನ ತಿಂಗಳವರೆಗೂ ನೋಟಿಸ್ ಅವಧಿಯನ್ನು ಪೂರೈಸಲಿದ್ದಾರೆ. ಮುಖ್ಯ ಕೋಚ್ ಗ್ರಹಾಂ ರೀಡ್ ಮತ್ತು ಸಹಾಯಕ ಸಿಬ್ಬಂದಿ ತಂಡ 2020 ರಲ್ಲಿ ನಡೆದ ಟೋಕಿಯೊ ಒಲಿಂಪಿಕ್ನಲ್ಲಿ ಭಾರತ ತಂಡ ಐತಿಹಾಸಿಕ ಕಂಚಿನ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೇ, ಕಳೆದ ವರ್ಷ ನಡೆದ ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಬೆಳ್ಳಿ ಪದಕ, 2021/22 ರ ಎಫ್‌ಐಎಚ್ ಹಾಕಿ ಪ್ರೊ ಲೀಗ್ ಋತುವಿನಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದರ ಭಾಗವಾಗಿದ್ದರು.
ಓದಿ: ಕಿವೀಸ್ ವಿರುದ್ಧದ ಸೆಣಸಾಟದಲ್ಲಿ ಭಾರತಕ್ಕೆ ಸೋಲು: ಇಂಡಿಯಾದ 15ನೇ ಆವೃತ್ತಿಯ ವಿಶ್ವಕಪ್ ಪಯಣ ಅಂತ್ಯ
ರೀಡ್ ಕೋಚ್ ಆದ ಬಳಿಕ 2019 ರಲ್ಲಿ ಎಫ್‌ಐಹೆಚ್ ಸಿರೀಸ್ನಲ್ಲಿ ಫೈನಲ್ ತಲುಪಿ ಭಾರತ ತಂಡ ಪ್ರಶಸ್ತಿ ಜಯಿಸಿತ್ತು. ತರುವಾಯ 2019 ರಲ್ಲಿ ಭುವನೇಶ್ವರದಲ್ಲಿ ನಡೆದ ಕ್ವಾಲಿಫೈಯರ್‌ಗಳನ್ನು ಗೆಲ್ಲುವ ಮೂಲಕ 2020 ರ ಟೋಕಿಯೊ ಒಲಿಂಪಿಕ್ ಗೇಮ್ಸ್ಗೆ ಅರ್ಹತೆ ಪಡೆದುಕೊಂಡಿತ್ತು.
ವಿಶ್ವಕಪ್ ಮುಗಿದ ದಿನದ ಬಳಿಕ ರಾಜೀನಾಮೆ:ಇನ್ನು ತವರಿನಲ್ಲೇ ನಡೆದ ಹಾಕಿ ವಿಶ್ವಕಪ್ ಮುಗಿದ ದಿನದ ಬಳಿಕ ಕೋಚ್ ಗ್ರಹಾಂ ರೀಡ್ ಅವರು ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟಿರ್ಕಿ, ಹಾಕಿ ಇಂಡಿಯಾ ಮತ್ತು ಪ್ರಧಾನ ಕಾರ್ಯದರ್ಶಿ ಭೋಲಾನಾಥ್ ಸಿಂಗ್ ಅವರನ್ನು ಬೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದಾರೆ. ತಂಡದ ಆಟಗಾರರು ಮತ್ತು ತಂಡದ ಸಹಾಯಕ ಸಿಬ್ಬಂದಿ ಮುಂದಿನ ಕಾರ್ಯತಂತ್ರಗಳನ್ನು ರೂಪಿಸಿಕೊಳ್ಳಿ ಎಂದು ಹಾಕಿ ಇಂಡಿಯಾ ಹೇಳಿದೆ.
ತಂಡದ ಜೊತೆಗಿನ ಪಯಣ ಸ್ಮರಣೀಯ:ರಾಜೀನಾಮೆ ಬಳಿಕ ಮಾತನಾಡಿರುವ ಗ್ರಹಾಂ ರೀಡ್, ಟೋಕಿಯೊ ಒಲಿಂಪಿಕ್ಸ್ನಲ್ಲಿ ಐತಿಹಾಸಿಕ ಕಂಚಿನ ಪದಕ, 2022ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಸಾಧನೆ ಮಾಡಿರುವುದು ಖುಷಿ ತಂದಿದೆ. ಈಗ ನಾನು ಹುದ್ದೆಯಿಂದ ಕೆಳಗಿಳಿಯುತ್ತಿದ್ದೇನೆ. ಮುಂದಿನ ಆಡಳಿತವನ್ನು ಮ್ಯಾನೇಜ್ಮೆಂಟ್ಗೆ ಹಸ್ತಾಂತರಿಸುವ ಸಮಯ ಬಂದಿದೆ. ತಂಡ ಮತ್ತು ಹಾಕಿ ಇಂಡಿಯಾದೊಂದಿಗೆ ಕೆಲಸ ಮಾಡುವುದು ದೊಡ್ಡ ಗೌರವವಾಗಿತ್ತು. ತಂಡದೊಂದಿಗಿನ ಪ್ರಯಾಣದ ಪ್ರತಿಯೊಂದು ಕ್ಷಣವನ್ನ ನಾನು ಆನಂದಿಸಿದ್ದೇನೆ. ತಂಡಕ್ಕೆ ಶುಭವಾಗಲಿ ಎಂದು ಹಾರೈಸಿದ್ದಾರೆ.
ಹಾಕಿ ಇಂಡಿಯಾ ಅಧ್ಯಕ್ಷ ಡಾ.ದಿಲೀಪ್ ಟಿರ್ಕಿ ಮಾತನಾಡಿ, ದೇಶಕ್ಕೆ, ವಿಶೇಷವಾಗಿ ಒಲಿಂಪಿಕ್ ಕ್ರೀಡಾಕೂಟದಲ್ಲಿ ಉತ್ತಮ ಫಲಿತಾಂಶಗಳನ್ನು ತಂದ ಗ್ರಹಾಂ ರೀಡ್ ಮತ್ತು ಅವರ ಸಹಾಯಕ ಸಿಬ್ಬಂದಿ ತಂಡಕ್ಕೆ ಭಾರತ ಯಾವಾಗಲೂ ಕೃತಜ್ಞವಾಗಿರುತ್ತದೆ. ನಮ್ಮ ತಂಡ ಹೊಸ ವಿಧಾನದತ್ತ ಸಾಗುವ ಸಮಯ ಬಂದಿದೆ ಎಂದು ಹೇಳಿದ್ದಾರೆ.
ವಿಶ್ವಕಪ್‌ನಲ್ಲಿ ಭಾರತದ ಸಾಧನೆ:ಎಫ್‌ಐಎಚ್ ಪುರುಷರ ಹಾಕಿ ವಿಶ್ವಕಪ್‌ನಲ್ಲಿ ಭಾರತ ತಂಡ ಕ್ವಾರ್ಟರ್ ಫೈನಲ್ ತಲುಪಲೂ ವಿಫಲವಾಗಿ ವಿಶ್ವಕಪ್ ಪಯಣ ಮುಗಿಸಿತ್ತು. ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಕ್ರಾಸ್ ಓವರ್ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್ನಲ್ಲಿ 5-4 ರಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿತ್ತು.
ಓದಿ:Hockey World Cup: ಫೈನಲ್ ಶೂಟೌಟ್ನಲ್ಲಿ ಜರ್ಮನಿಗೆ ಗೆಲುವು, ಮೂರನೇ ಬಾರಿಗೆ ಕಪ್ ಮುಡಿಗೆ