ವೆಲೆನ್ಸಿಯಾ (ಸ್ಪೇನ್):ವೆಲೆನ್ಸಿಯಾದಲ್ಲಿ ಭಾನುವಾರ ನಡೆದ ಎಫ್‌ಐಎಚ್ ಮಹಿಳಾ ನೇಷನ್ಸ್ ಕಪ್ನಲ್ಲಿ ಭಾರತ ಮಹಿಳಾ ಹಾಕಿ ತಂಡ ಭರ್ಜರಿ ಜಯ ದಾಖಲಿಸಿದೆ. ಚಿಲಿ ವಿರುದ್ಧ 3-1 ಗೋಲುಗಳಿಂದ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿದೆ.
ಭಾರತದ ಫಾರ್ವರ್ಡ್ ಆಟಗಾರ್ತಿ ಸಂಗೀತಾ ಕುಮಾರಿ (2ನೇ ನಿಮಿಷ), ಮಿಡ್‌ಫೀಲ್ಡರ್ ಸೋನಿಕಾ (10ನೇ ನಿಮಿಷ) ನವನೀತ್ ಕೌರ್ (31ನೇ ನಿಮಿಷ)ದಲ್ಲಿ ಗೋಲು ಬಾರಿಸಿದರೆ, 43ನೇ ನಿಮಿಷದಲ್ಲಿ ಚಿಲಿಯ ಫರ್ನಾಂಡ್ ವಿಲಗ್ರಾನ್ ಏಕೈಕ ಗೋಲು ಗಳಿಸಿದರು.
ಭಾರತೀಯ ಮಹಿಳೆಯರ ವೇಗಕ್ಕೆ ಚಿಲಿ ಮೂಕವಿಸ್ಮಿತವಾಯಿತು. ಪಂದ್ಯ ಆರಂಭವಾದ ಎರಡೇ ನಿಮಿಷದಲ್ಲಿ ಸಂಗೀತಾ ಕುಮಾರಿ ಮಾಡಿದ ಚಮತ್ಕಾರದಿಂದ ಗೋಲು ದಾಖಲಾಯಿತು. 10ನೇ ನಿಮಿಷದಲ್ಲಿ ನವನೀತ್ ಕೌರ್ ಚಿಲಿ ವನಿತೆಯರ ರಕ್ಷಣಾ ಕೋಟೆ ಭೇದಿಸಿ ಸೋನಿಕಾಗೆ ಪಾಸ್ ನೀಡಿದರು. ತಡಮಾಡದ ಸೋನಿಕಾ ಚಂಗನೇ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿದರು. ಹತ್ತೇ ನಿಮಿಷದಲ್ಲಿ ಭಾರತ 2-0 ಮುನ್ನಡೆ ಪಡೆಯಿತು.
ವಿಶ್ವ ನಂ.8 ಶ್ರೇಯಾಂಕದಲ್ಲಿರುವ ಭಾರತಕ್ಕೆ 14 ನೇ ಕ್ರಮಾಂಕದಲ್ಲಿರುವ ಚಿಲಿ ಯಾವುದೇ ಹಂತದಲ್ಲಿ ಸವಾಲಾಗಲಿಲ್ಲ. ಎರಡನೇ ಕ್ವಾರ್ಟರ್‌ನಲ್ಲಿ ಇನ್ನಷ್ಟು ಪ್ರಖರ ದಾಳಿಗಿಳಿದ ಭಾರತ ಚಿಲಿಯ ಎಲ್ಲ ದಾಳಿಗಳನ್ನು ನಿಗ್ರಹಿಸಿತು. ಹಲವು ಪೆನಾಲ್ಟಿ ಕಾರ್ನರ್‌ಗಳು ಪಡೆದರೂ ಚಿಲಿ ಮಹಿಳೆಯರು ಗೋಲು ಬಾರಿಸಲಾಗಲಿಲ್ಲ. ಇದರಿಂದ ಅರ್ಧವಿರಾಮದ ವೇಳೆಗೆ ಭಾರತ 2-0 ಮುನ್ನಡೆಯಲ್ಲಿತ್ತು.
ಮೂರನೇ ಕ್ವಾರ್ಟರ್‌ನಲ್ಲಿ ಉಭಯ ತಂಡಗಳು ತಲಾ ಒಂದು ಗೋಲು ಗಳಿಸಿದವು. 31ನೇ ನಿಮಿಷದಲ್ಲಿ ನವನೀತ್ ಕೌರ್ ಟಾಪ್ ಕಾರ್ನರ್‌ನಲ್ಲಿ ಗೋಲು ಗಳಿಸಿ 3-0 ಮುನ್ನಡೆ ಪಡೆಯಿತು. ಬಳಿಕ 43ನೇ ನಿಮಿಷದಲ್ಲಿ ಚಿಲಿಯ ಫೆರ್ನಾಂಡಾ ವಿಲ್ಲಾಗ್ರಾನ್ ಭಾರತದ ಗೋಲ್‌ಕೀಪರ್ ಮತ್ತು ನಾಯಕಿ ಸವಿತಾ ಪುನಿಯಾ ತಡೆಗೋಡೆ ಭೇದಿಸಿ ಗೋಲು ಬಾರಿಸಿದರು. 3-1 ರಲ್ಲಿ ಪಂದ್ಯ ಸಾಗಿತು.
ನಾಲ್ಕನೇ ಕ್ವಾರ್ಟರ್‌ನಲ್ಲಿ ಚಿಲಿ ಗೋಲು ಗಳಿಸಲು ಹಲವು ಯತ್ನ ಮಾಡಿದಾಗ್ಯೂ ಸಫಲವಾಗದೇ ಪಂದ್ಯ ಸೋತಿತು. ಭಾರತದ ವನಿತೆಯರು ಇದೇ ಮೈದಾನದಲ್ಲಿ ಸೋಮವಾರ ವಿಶ್ವದ ನಂ.11 ಮತ್ತು ಏಷ್ಯನ್ ಚಾಂಪಿಯನ್ ಜಪಾನ್ ವನಿತೆಯರನ್ನು ಎದುರಿಸಲಿದ್ದಾರೆ. ಪ್ರತಿ ಗುಂಪಿನಿಂದ ಅಗ್ರಸ್ಥಾನ ಪಡೆದ ಎರಡು ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ.
ಓದಿ:ವಿಶ್ವಕಪ್ ಕನಸು ಕಮರಿತು.. ವಿಶ್ವಶ್ರೇಷ್ಠ ಫುಟ್ಬಾಲಿಗ ಕ್ರಿಶ್ಚಿಯಾನೊ ರೊನಾಲ್ಡೊ ಭಾವನಾತ್ಮಕ ಪೋಸ್ಟ್