ಬೆಂಗಳೂರು: ಜನವರಿ 13 ರಿಂದ 19ರ ವರೆಗೆ ರಾಂಚಿಯಲ್ಲಿ ನಡೆಯಲಿರುವ ಎಫ್‌ಐಎಚ್ ಹಾಕಿ ಒಲಿಂಪಿಕ್ ಕ್ವಾಲಿಫೈಯರ್ 2024ಕ್ಕೆ 18 ಸದಸ್ಯರ ಭಾರತೀಯ ಮಹಿಳಾ ಹಾಕಿ ತಂಡವನ್ನು ಹಾಕಿ ಇಂಡಿಯಾ ಶನಿವಾರ ಹೆಸರಿಸಿದೆ. ಸ್ಪರ್ಧೆಯಲ್ಲಿ ಅಗ್ರ ಮೂರು ತಂಡಗಳಲ್ಲಿ ಒಂದಾಗಿ ಸ್ಥಾನ ಪಡೆಯುವ ಮತ್ತು ಪ್ಯಾರಿಸ್ 2024 ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಗುರಿಯೊಂದಿಗೆ ತಂಡವು ರಾಂಚಿಯಲ್ಲಿ ಮೈದಾನಕ್ಕಿಳಿಯಲಿದೆ. ನ್ಯೂಜಿಲೆಂಡ್, ಇಟಲಿ ಮತ್ತು ಯುನೈಟೆಡ್ ಸ್ಟೇಟ್ಸ್ ಜೊತೆಗೆ ಭಾರತವನ್ನು ಪೂಲ್ ಬಿ ನಲ್ಲಿ ಇರಿಸಲಾಗಿದೆ. ಜರ್ಮನಿ, ಜಪಾನ್, ಚಿಲಿ ಮತ್ತು ಜೆಕ್ ಗಣರಾಜ್ಯಗಳು ಪೂಲ್ ಎ ನಲ್ಲಿ ಸೆಣಸಾಡಲಿವೆ.
ಭಾರತವು ಜನವರಿ 13 ರಂದು ಯುನೈಟೆಡ್ ಸ್ಟೇಟ್ಸ್ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ನಂತರ ಜನವರಿ 14ರಂದು ನ್ಯೂಜಿಲೆಂಡ್ ವಿರುದ್ಧದ ಪಂದ್ಯವನ್ನು ನಡೆಸಲಿದೆ ಮತ್ತು ಅವರು ಜನವರಿ 16 ರಂದು ಕೊನೆಯ ಪೂಲ್ ಬಿ ಪಂದ್ಯದಲ್ಲಿ ಇಟಲಿ ವಿರುದ್ಧ ಸೆಣಸಲಿದ್ದಾರೆ.
ರಾಂಚಿ 2024ರ ಎಫ್‌ಐಎಚ್ ಹಾಕಿ ಒಲಿಂಪಿಕ್ ಅರ್ಹತಾ ಪಂದ್ಯಗಳಿಗೆ ಭಾರತೀಯ ಮಹಿಳಾ ಹಾಕಿ ತಂಡವು ಗೋಲ್‌ಕೀಪರ್‌ಗಳಾದ ಸವಿತಾ ಮತ್ತು ಬಿಚು ದೇವಿ ಖರಿಬಮ್ ಅವರನ್ನು ಒಳಗೊಂಡಿದೆ. ಇವರ ಜೊತೆಗೆ ನಿಕ್ಕಿ ಪ್ರಧಾನ್, ಉದಿತಾ, ಇಶಿಕಾ ಚೌಧರಿ ಮತ್ತು ಮೋನಿಕಾ ಅವರನ್ನು ತಂಡದಲ್ಲಿ ಡಿಫೆಂಡರ್‌ಗಳಾಗಿ ಹೆಸರಿಸಲಾಗಿದೆ. ನಿಶಾ, ವೈಷ್ಣವಿ ವಿಠ್ಠಲ್ ಫಾಲ್ಕೆ, ನೇಹಾ, ನವನೀತ್ ಕೌರ್, ಸಲಿಮಾ ಟೆಟೆ, ಸೋನಿಕಾ, ಜ್ಯೋತಿ ಮತ್ತು ಬ್ಯೂಟಿ ಡುಂಗ್‌ಡಂಗ್ ಮಿಡ್‌ಫೀಲ್ಡ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಲಾಲ್ರೆಮ್ಸಿಯಾಮಿ, ಸಂಗೀತಾ ಕುಮಾರಿ, ದೀಪಿಕಾ, ಮತ್ತು ವಂದನಾ ಕಟಾರಿಯಾ ಮುಂಚೂಣಿಯಲ್ಲಿ ಮುನ್ನಡೆಯಲಿದ್ದಾರೆ.