ನವ ದೆಹಲಿ: ಭಾರತದ ಓಟದ ಸ್ಪರ್ಧಿ ಹಿಮಾ ದಾಸ್ ಅವರು ಅಸ್ಸಾಂನ ಸಾಂಪ್ರದಾಯಿಕ ಗಮ್ಚಾ ಶಾಲನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಡುಗೊರೆ ನೀಡಿ ಗಮನ ಸೆಳೆದಿದ್ದಾರೆ. ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾಗಿಯಾದ ತಂಡದೊಂದಿಗೆ ಮೋದಿ ಅವರು ನಿನ್ನೆ ಸಂವಾದ ನಡೆಸಿದ್ದರು. ಈ ವೇಳೆ ಪ್ರಧಾನಿ ಭೇಟಿ ಮಾಡಿದ ಹಿಮಾ ಅವರು ಗಮ್ಚಾ ತೊಡಿಸಿದ್ದಾರೆ.
ಇದನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ಹಿಮಾ ದಾಸ್, ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶೀರ್ವಾದ ಸ್ವೀಕರಿಸಿದ್ದೇನೆ. ಕಾಮನ್ವೆಲ್ತ್ ಗೇಮ್ಸ್ ತಂಡದೊಂದಿಗೆ ನಡೆದ ಸಂವಾದದ ಬಳಿಕ ಅವರಿಗೆ ಸಾಂಪ್ರದಾಯಿಕ ಗಮ್ಚಾವನ್ನು ಉಡುಗೊರೆಯಾಗಿ ನೀಡಿದೆ. ಇದನ್ನು ಸ್ವೀಕರಿಸಿದ್ದಕ್ಕಾಗಿ ಅಸ್ಸಾಂ ಜನರ ಪರವಾಗಿ ನನ್ನ ಕೃತಜ್ಞತೆಗಳು ಎಂದು ತಿಳಿಸಿದ್ದಾರೆ.
2018 ರ ಕಿರಿಯರ ಓಟದ ವಿಶ್ವ ಚಾಂಪಿಯನ್ ಹಿಮಾ ದಾಸ್, ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಪದಕ ಸಾಧನೆ ಮಾಡದಿದ್ದರೂ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. 200 ಮೀಟರ್ ಓಟದ ಸ್ಪರ್ಧೆಯ ಸೆಮಿಫೈನಲ್‌ನಲ್ಲಿ 10 ನೇ ಸ್ಥಾನದಲ್ಲಿ ಗುರಿ ಮುಟ್ಟಿ ಫೈನಲ್ನಿಂದ ತಪ್ಪಿಸಿಕೊಂಡರು. ಅದೂ ಕೇವಲ 0.01 ಸೆಕೆಂಡ್ ಅಂತರದಲ್ಲಿ. ಬಳಿಕ 100 ಮೀಟರ್ ಸ್ಪರ್ಧೆಯಲ್ಲಿ ಮೂರನೆಯವರಾಗಿ ಓಡಿ ಫೈನಲ್ನಿಂದ ವಂಚಿತರಾಗಿದ್ದರು.
ಯುಕೆಯ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕೂಟದಲ್ಲಿ ಭಾರತೀಯ ಅಥ್ಲೀಟ್‌ಗಳು ಒಟ್ಟು 22 ಚಿನ್ನ, 16 ಬೆಳ್ಳಿ ಮತ್ತು 23 ಕಂಚು ಸಮೇತ 61 ಪದಕಗಳನ್ನು ಜಯಿಸಿದರು. ಭಾರತ ಪದಕ ಪಟ್ಟಿಯಲ್ಲಿ 4ನೇ ಸ್ಥಾನ ಗಳಿಸಿದೆ.
ಇದನ್ನೂ ಓದಿ:ಸ್ವಾತಂತ್ರ್ಯ ಅಮೃತ ಮಹೋತ್ಸವ ವರ್ಷದಲ್ಲಿ ಭಾರತಕ್ಕೆ ಸಿಗುತ್ತಾ ಟಿ20 ವಿಶ್ವಕಪ್ ಕಿರೀಟ?