ಟೋಕಿಯೋ: ಪ್ಯಾರಾಲಿಂಪಿಕ್ಸ್ನಲ್ಲಿ ಭಾರತದ ಪದಕ ಬೇಟೆ ಸತತ 3ನೇ ದಿನವೂ ಮುಂದುವರಿದಿದ್ದು, ಮಂಗಳವಾರ ಹೈಜಂಪ್ನಲ್ಲಿ ಮರಿಯಪ್ಪನ್ ತಂಗವೇಲು ಬೆಳ್ಳಿ ಗೆದ್ದರೆ, ಇದೇ ವಿಭಾಗದಲ್ಲಿ ಶರದ್ ಕುಮಾರ್ ಕಂಚಿನ ಪದಕ ಪಡೆದಿದ್ದಾರೆ.
ಪುರುಷರ ಹೈಜಂಪ್ T63 ಸ್ಪರ್ಧೆಯಲ್ಲಿ ಮರಿಯಪ್ಪನ್ ತಂಗವೇಲು ಬೆಳ್ಳಿ ಗೆಲ್ಲುವ ಮೂಲಕ ಭಾರತಕ್ಕೆ 9ನೇ ಪದಕ ತಂದುಕೊಟ್ಟರು. ತಂಗವೇಲು 2016ರ ರಿಯೋ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಶರದ್ ಕುಮಾರ್ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದರು. ಇಂದು ಅಮೆರಿಕದ ಸ್ಯಾಮ್ ಗ್ರೇವ್ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.
ಗ್ರೇವ್ 1.88 ಮೀಟರ್ ಯಶಸ್ವಿಯಾಗಿ ಜಿಗಿದು ಸ್ವರ್ಣ ಗೆದ್ದರೆ, ತಮ್ಮ ಮೂರೂ ಪ್ರಯತ್ನದಲ್ಲಿ 1.88 ಮೀಟರ್ ಜಿಗಿಯಲು ವಿಫಲರಾದ ತಂಗವೇಲು ಬೆಳ್ಳಿ ಪದಕ ಪಡೆದರು. ಅವರು 1.86 ಮೀಟರ್ ಎತ್ತರವನ್ನು ತಮ್ಮ 3ನೇ ಪ್ರಯತ್ನದಲ್ಲಿ ಯಶಸ್ವಿಯಾಗಿ ಜಿಗಿದರು. ಶರದ್ ಕುಮಾರ್ 1.83 ಎತ್ತರನ್ನು ಯಶಸ್ವಿಯಾಗಿ ಜಿಗಿದು ಕಂಚಿಗೆ ತೃಪ್ತಿಪಟ್ಟುಕೊಂಡರು.
ಭಾರತ ಒಟ್ಟಾರೆ 2020ರ ಪ್ಯಾರಾಲಿಂಪಿಕ್ಸ್ನಲ್ಲಿ ಇದೇ ಮೊದಲ ಬಾರಿಗೆ ಪದಕ ಗಳಿಕೆಯಲ್ಲಿ ಎರಡಂಕಿ ದಾಟಿದೆ. ಶೂಟರ್ ಅವನಿ ಲೇಖಾರಾ ಮತ್ತು ಜಾವಲಿನ್ ಥ್ರೋವರ್ ಸುಮಿತ್ ಅಂತಿಲ್ ಚಿನ್ನದ ಪದಕ ತಂದುಕೊಟ್ಟರೆ, ದೇವೇಂದ್ರ ಜಜಾರಿಯಾ(ಜಾವಲಿನ್), ಭಾವಿನಾ ಪಟೇಲ್(ಟೇಬಲ್ ಟೆನಿಸ್), ತಂಗವೇಲು ಮತ್ತು ನಿಷಾದ್ ಕುಮಾರ್( ಪ್ರತ್ಯೇಕ ಹೈಜಂಪ್), ಯೋಗೇಶ್ ಕಥುನಿಯಾ(ಡಿಸ್ಕಸ್ ಥ್ರೋ) ಬೆಳ್ಳಿ ಪದಕ ಗೆದ್ದಿದ್ದಾರೆ.
ಶೂಟರ್ ಸಿಂಗ್ರಾಜ್ ಅದಾನ, ಸುರೇಂದ್ರ ಸಿಂಗ್ ಗುರ್ಜಾರ್(ಜಾವಲಿನ್) ಮತ್ತು ಶರದ್ ಕುಮಾರ್(ಹೈಜಂಪ್) ಕಂಚಿನ ಪದಕ ಪಡೆದಿದ್ದಾರೆ. 1984 ನ್ಯೂಯಾರ್ಕ್ ಮತ್ತು 2016ರ ರಿಯೋ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತ ತಲಾ 4 ಪದಕ ಗೆದ್ದಿದ್ದು ಇಲ್ಲಿಯವರೆಗಿನ ಗರಿಷ್ಠ ಪದಕಗಳಾಗಿದ್ದವು. ಇದೀಗ ಭಾರತ ಒಟ್ಟು 10 ಪದಕಗಳನ್ನು ತನ್ನ ಖಾತೆಗೆ ಸೇರಿಸಿಕೊಂಡಿದ್ದು, ಇನ್ನೂ ಮತ್ತಷ್ಟು ಪದಕಗಳು ಬರುವ ಸಾಧ್ಯತೆಗಳಿವೆ.