ನೈರೋಬಿ: ಭಾರತ ಪ್ರತಿಭಾನ್ವಿತ ಲಾಂಗ್ ಜಂಪರ್ ಶೈಲಿ ಸಿಂಗ್ ಭಾನುವಾರ ನಡೆದ ಅಂಡರ್ 20 ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆಲ್ಲುವ ಅವಕಾಶವನ್ನು ಕೂದಲೆಳೆಯಂತರದಲ್ಲಿ ಕಳೆದುಕೊಂಡರೂ ಬೆಳ್ಳಿ ಪದಕ ಗೆದ್ದು ದೇಶಕ್ಕೆ ಹೆಮ್ಮೆ ತಂದಿದ್ದಾರೆ.
ಭಾನುವಾರ ನಡೆದ ಅಂತಿಮ ಹಣಾಹಣಿಯಲ್ಲಿ 17 ವರ್ಷದ ಶೈಲಿ 6.59 ಸೆಂಟಿ ಮೀಟರ್ ದೂರ ಜಿಗಿದು ಬೆಳ್ಳಿ ಪದಕ ಸಾಧಿಸಿದರು. ಹಾಲಿ ಯುರೋಪಿಯನ್ ಜೂನಿಯರ್ ಚಾಂಪಿಯನ್ ಆಗಿರುವ ಸ್ವೀಡನ್ನ ಮಜಾ ಅಸ್ಕಾಗ್ 6.60 ಮೀಟರ್ ಜಿಗಿದು ಚಿನ್ನದ ಪದಕ ಗೆದ್ದರು. ಲೀಗ್ನಿಂದಲೂ ಉತ್ತಮ ಪ್ರದರ್ಶನ ತೋರಿದ್ದ ಶೈಲಿ ಕೇವಲ 1 ಸೆಂಟಿ ಮೀಟರ್ ಅಂತರದಲ್ಲಿ ಐತಿಹಾಸಿಕ ಚಿನ್ನದ ಪದಕ ತಪ್ಪಿಸಿಕೊಂಡರು.
ಲೆಜೆಂಡರಿ ಲಾಂಗ್ ಜಂಪರ್ ಅಂಜು ಬಾಬಿ ಜಾರ್ಜ್ ಅವರಿಂದ ತರಬೇತಿ ಪಡೆದಿದ್ದ ಶೈಲಿ ಮೂರನೇ ಸುತ್ತಿನಲ್ಲಿ ಅಗ್ರಸ್ಥಾನ ಪಡೆದಿದ್ದರು. ಆದರೆ ಸ್ವೀಡನ್ನ 18ನೇ ವರ್ಷದ ಅಥ್ಲೀಟ್ ನಾಲ್ಕನೇ ಸುತ್ತಿನಲ್ಲಿ ಶೈಲಿಗಿಂತ ಒಂದು ಸೆಂಟಿ ಮೀಟರ್ ಹೆಚ್ಚು ಜಿಗಿದು ಚಿನ್ನಕ್ಕೆ ಮುತ್ತಿಟ್ಟರು. ಉಕ್ರೇನ್ನ ಮರಿಯಾ ಹೊರೀಲೋವಾ 6.50 ಮೀಟರ್ ಜಿಗಿದು ಕಂಚಿನ ಪದಕ ಪಡೆದರು.
ಭಾರತ ಚಾಂಪಿಯನ್ಶಿಪ್ನಲ್ಲಿ 2 ಬೆಳ್ಳಿ ಮತ್ತು 1 ಕಂಚು ಸೇರಿದಂತೆ 3 ಪದಕಗಳೊಡನೆ ತನ್ನ ಅಭಿಯಾನವನ್ನು ಅಂತ್ಯಗೊಳಿಸಿತು. ಶನಿವಾರ 10,000 ಮೀಟರ್ ನಡಿಗೆ ಸ್ಪರ್ಧೆಯಲ್ಲಿ ಅಮಿತ್ ಖತ್ರಿ ಬೆಳ್ಳಿ ಪದಕ ಪಡೆದರೆ, ಬುಧವಾರ 4x400 ಮಿಶ್ರ ರಿಲೆಯಲ್ಲಿ ಭಾರತ ತಂಡ ಕಂಚು ಜಯಿಸಿತ್ತು. ಈ ಹಿಂದಿನ 2 ಆವೃತ್ತಿಗಳಲ್ಲಿ ಭಾರತ ತಲಾ ಒಂದು ಚಿನ್ನದ ಪದಕ ಗೆದ್ದಿತ್ತು. 2016ರಲ್ಲಿ ನೀರಜ್ ಚೋಪ್ರಾ ಜಾವಲಿನ್ ಥ್ರೋನಲ್ಲಿ ಚಿನ್ನ ಗೆದ್ದರೆ, 2018ರಲ್ಲಿ ಹಿಮಾದಾಸ್ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದರು.
ಇದನ್ನು ಓದಿ:10,000 ಮೀ. ನಡಿಗೆ ಸ್ಪರ್ಧೆಯಲ್ಲಿ ಐತಿಹಾಸಿಕ ಬೆಳ್ಳಿ ಪದಕ ಗೆದ್ದ ಭಾರತದ ಅಮಿತ್ ಖತ್ರಿ