ಹ್ಯಾಂಗ್ಝೌ (ಚೀನಾ):ಇಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ 22ನೇ ಚಿನ್ನದ ಪದಕ ಒಲಿದಿದೆ. ಇಂದು ಪುರುಷರ ಹಾಕಿ ತಂಡ ಜಪಾನ್ ವಿರುದ್ಧ 5-1 ಅಂತರದ ಗೆಲುವು ದಾಖಲಿಸಿತು. ಈ ಮೂಲಕ ಹಾಲಿ ಚಾಂಪಿಯನ್ನರನ್ನು ಮಣಿಸಿದ ಭಾರತ ಚಿನ್ನ ಮುಡಿಗೇರಿಸಿಕೊಂಡಿತು. ಇದರೊಂದಿಗೆ 2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ತನ್ನ ಸ್ಥಾನ ಖಚಿತಪಡಿಸಿದೆ.
1966 ಬ್ಯಾಂಕಾಕ್, 1998 ಬ್ಯಾಂಕಾಕ್ ಮತ್ತು 2014 ಇಂಚಿಯಾನ್ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಭಾರತಕ್ಕೆ ಇದು ನಾಲ್ಕನೇ ಪದಕ. ಇದುವರೆಗೆ ಏಷ್ಯಾಡ್ನಲ್ಲಿ ಒಂಬತ್ತು ಬೆಳ್ಳಿ ಮತ್ತು ಮೂರು ಕಂಚಿನ ಪದಕವನ್ನು ಭಾರತ ಗೆದ್ದುಕೊಂಡಿದೆ. ಪುರುಷರ ಹಾಕಿಯಲ್ಲಿ ತಲಾ ನಾಲ್ಕು ಚಿನ್ನದ ಪದಕಗಳೊಂದಿಗೆ ಭಾರತ ಎರಡನೇ ಅತ್ಯಂತ ಯಶಸ್ವಿ ತಂಡವಾಗಿದೆ. ದಕ್ಷಿಣ ಕೊರಿಯಾದ ಜೊತೆಗೆ ಜಂಟಿಯಾಗಿ ಎರಡನೇ ಸ್ಥಾನವನ್ನು ಹಂಚಿಕೊಂಡಿದೆ. ಪಾಕಿಸ್ತಾನ ಎಂಟು ಚಿನ್ನದ ಪದಕ ಗೆದ್ದಿದ್ದು ಅಗ್ರಸ್ಥಾನದಲ್ಲಿದೆ.
ಶುಕ್ರವಾರ ನಡೆದ ಫೈನಲ್‌ನಲ್ಲಿ ಭಾರತ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ (32ನೇ, 59ನೇ ನಿಮಿಷ), ಮನ್‌ಪ್ರೀತ್ ಸಿಂಗ್ (25ನೇ ನಿ.), ಅಮಿತ್ ರೋಹಿದಾಸ್ (36ನೇ ನಿ.) ಮತ್ತು ಅಭಿಷೇಕ್ (48ನೇ ನಿ.) ಅವರ ಗೋಲುಗಳ ನೆರವಿನಿಂದ 5-1 ಅಂತರದಲ್ಲಿ ಜಪಾನ್ ತಂಡವನ್ನು ಸೋಲಿಸಿತು. 51ನೇ ನಿಮಿಷದಲ್ಲಿ ಪರೋಕ್ಷ ಪೆನಾಲ್ಟಿ ಕಾರ್ನರ್‌ನಲ್ಲಿ ಸೆರೆನ್ ತನಕಾ ಅವರು ಜಪಾನ್ ಪರ ಏಕೈಕ ಗೋಲು ದಾಖಲಿಸಿದರು.
ಮೊದಲ ಕ್ವಾರ್ಟರ್ ಅವಧಿಯಲ್ಲಿ ಎರಡೂ ತಂಡಗಳು ಅಂಕಕ್ಕಾಗಿ ಪರದಾಡಿದವು. ಜಪಾನ್ ಭಾರತದ ಫಾರ್ವರ್ಡ್ ಆಟಗಾರರ ವಿರುದ್ಧ ಉತ್ತಮವಾಗಿ ಕಾರ್ಯನಿರ್ವಹಿಸಿತು. ಭಾರತ ತನ್ನ ಮೊದಲ ಪೆನಾಲ್ಟಿ ಕಾರ್ನರ್ ಸೇರಿದಂತೆ ಒಂದೆರಡು ಅವಕಾಶಗಳನ್ನು ಹೊಂದಿತ್ತು. ಆದರೆ ಜಪಾನ್ ಗೋಲ್‌ಕೀಪರ್ ತುಕುಮಿ ಕಿಟಗಾವಾ ಹರ್ಮನ್‌ಪ್ರೀತ್ ಅವರ ಡ್ರ್ಯಾಗ್ ಫ್ಲಿಕ್ ತಡೆಯುವಲ್ಲಿ ಯಶಸ್ವಿಯಾದರು.