ನವದೆಹಲಿ: ಜಿಮ್ನಾಸ್ಟಿಕ್ನಲ್ಲಿ ಪ್ರಥಮ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿದ್ದ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಅವರಿಗೆ ಅಂತಾರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಐಟಿಎ) ನಿಷೇಧ ಹೇರಿದೆ. ನಿಷೇಧಿತ ಪದಾರ್ಥಗಳನ್ನು ಸೇವಿಸಿದ್ದಕ್ಕಾಗಿ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಅವರನ್ನು 21 ತಿಂಗಳ ಕಾಲ ನಿಷೇಧಿಸಲಾಗಿದೆ. ದೀಪಾ ಕರ್ಮಾಕರ್ ಅವರು ಹೈಜೆನಮೈನ್ ಸೇವಿಸಿರುವ ಬಗ್ಗೆ ಸಾಬೀತಾಗಿದ್ದು, ಇವರನ್ನು ಐಟಿಎ ತಪ್ಪಿತಸ್ಥರೆಂದು ಘೋಷಣೆ ಮಾಡಿದೆ. 2023ರ ಜುಲೈ 10 ವರೆಗೆ ದೀಪಾ ಕರ್ಮಾಕರ್ ಅವರನ್ನು ಆಟಗಳಿಂದ ನಿಷೇಧಿಸಲಾಗಿದೆ.
ಡೋಪ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ದೀಪಾ ಕರ್ಮಾಕರ್ ಮೇಲೆ 21 ತಿಂಗಳ ನಿಷೇಧ ಹೇರಲಾಗಿದೆ. ದೀಪಾ ಕರ್ಮಾಕರ್ ಅವರನ್ನು 21 ತಿಂಗಳ ಕಾಲ ಅಮಾನತುಗೊಳಿಸಲಾಗಿದೆ ಎಂದು ಐಟಿಎ ಮಾಹಿತಿ ನೀಡಿದೆ. FIG ಆ್ಯಂಟಿ-ಡೋಪಿಂಗ್ ನಿಯಮಗಳ ಆರ್ಟಿಕಲ್ 10.8.2 ರ ಪ್ರಕಾರ ಈ ವಿಷಯವನ್ನು ಸೆಟಲ್ಮೆಂಟ್ ಒಪ್ಪಂದದ ಮೂಲಕ ಪರಿಹರಿಸಲಾಗಿದೆ ಎಂದು ಐಟಿಎ ಹೇಳಿದೆ. ದೀಪಾ ಕರ್ಮಾಕರ್ ರಿಯೊ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ ದೇಶದ ಮೊದಲ ಜಿಮ್ನಾಸ್ಟ್.
ಹಿಜೆನಮೈನ್ ಎಂದರೇನು?:ಯುನೈಟೆಡ್ ಸ್ಟೇಟ್ಸ್ ಆ್ಯಂಟಿ-ಡೋಪಿಂಗ್ ಏಜೆನ್ಸಿ (ಯುಎಸ್ಎಡಿಎ) ಪ್ರಕಾರ, ಹಿಜೆನಮೈನ್ ಮಿಶ್ರ ಅಡ್ರಿನರ್ಜಿಕ್ ರಿಸೆಪ್ಟರ್ ಚಟುವಟಿಕೆಯನ್ನು ಹೊಂದಿದೆ. ಅಂದರೆ ಅದು ಸಾಮಾನ್ಯ ಉತ್ತೇಜಕವಾಗಿ ಕಾರ್ಯನಿರ್ವಹಿಸುತ್ತದೆ. ಇದನ್ನು ವಾಡಾ 2017 ರಲ್ಲಿ ನಿಷೇಧಿತ ವಸ್ತುಗಳ ಪಟ್ಟಿಗೆ ಸೇರಿಸಿದೆ. ಹೈಜೆನಮೈನ್ ಆಸ್ತಮಾ ವಿರೋಧಿಯಾಗಿ ಕಾರ್ಯನಿರ್ವಹಿಸಬಹುದು. ಇದು ಕಾರ್ಡಿಯೋಟೋನಿಕ್ ಆಗಿರಬಹುದು. ಅಂದರೆ ಹೃದಯ ಬಡಿತವನ್ನು ಬಲಪಡಿಸುತ್ತದೆ.
ದೀಪಾ ಕರ್ಮಾಕರ್ ಯಾರು?:ತ್ರಿಪುರಾ ನಿವಾಸಿ ದೀಪಾ ಕರ್ಮಾಕರ್ ಅವರು ಭಾರತದ ಅಗ್ರ ಜಿಮ್ನಾಸ್ಟ್‌ನಿಂದ ಬಂದವರು. 2024ರ ಗ್ಲಾಸ್ಗೋ ಕಾಮನ್‌ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಜಿಮ್ನಾಸ್ಟಿಕ್ ಚಾಂಪಿಯನ್‌ಶಿಪ್‌ನಲ್ಲಿ ದೀಪಾ ಕಂಚಿನ ಪದಕ ಗೆದ್ದಿದ್ದಾರೆ. 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು. 2018 ರಲ್ಲಿ ಟರ್ಕಿಯ ಮರ್ಸಿನ್‌ನಲ್ಲಿ ನಡೆದ ಎಫ್‌ಐಜಿ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ವರ್ಲ್ಡ್ ಚಾಲೆಂಜ್ ಕಪ್‌ನ ವಾಲ್ಟ್ ಸ್ಪರ್ಧೆಯಲ್ಲಿ ದೀಪಾ ದೇಶಕ್ಕೆ ಚಿನ್ನದ ಪದಕವನ್ನು ತಂದುಕೊಟ್ಟಿದ್ದಾರೆ. ಈ ಸಾಧನೆ ಮಾಡಿದ ಭಾರತದ ಮೊದಲ ಜಿಮ್ನಾಸ್ಟ್ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.
ಇದನ್ನೂ ಓದಿ:ವಿಶ್ವಕಪ್ನಲ್ಲಿ ಭಾರತ ಕಳಪೆ ಪ್ರದರ್ಶನ: ಪುರುಷರ ಹಾಕಿ ಕೋಚ್ ಗ್ರಹಾಂ ರೀಡ್ ರಾಜೀನಾಮೆ