ಬೆಂಗಳೂರು:ಆರಂಭದಿಂದಲೂ ಹಿನ್ನಡೆಗೆ ಒಳಗಾದರೂ, ಕೊನೆಯ 3 ನಿಮಿಷಗಳಲ್ಲಿ ಅದ್ಭುತವಾಗಿ ಕಮ್ಬ್ಯಾಕ್ ಮಾಡಿ 2 ಅಂಕ ಮುನ್ನಡೆ ಪಡೆದುಕೊಂಡರೂ ಸಹಾ, ಅಂತಿಮ 45 ಸೆಕೆಂಡ್ಗಳ ಆಟ ಇರುವಾಗ ಡಿಫೆಂಡಿಂಗ್ನಲ್ಲಿ ಮಾಡಿದ ಎಡವಟ್ಟಿನಿಂದ ಬೆಂಗಳೂರು ಬುಲ್ಸ್ ಸೋಲು ಕಂಡು ನಿರಾಶೆಯನುಭಿಸಿದೆ.
ಬೆಂಗಳೂರು ಬುಲ್ಸ್ ಭಾನುವಾರ ನಡೆದ ಪಂದ್ಯದಲ್ಲಿ ಗುಜುರಾತ್ ಜೈಂಟ್ಸ್ ವಿರುದ್ಧ 40-36ರಲ್ಲಿ ಸೋಲು ಕಂಡಿದೆ. ಈ ಮೂಲಕ ನಾಕೌಟ್ ಸ್ಥಾನವನ್ನು ಕಳೆದುಕೊಳ್ಳುವ ಭೀತಿ ಕೂಡ ಎದುರಾಗಿದೆ.
ಮೊದಲಾರ್ಧದದಲ್ಲಿ ಎರಡೂ ತಂಡಗಳೂ ಉತ್ತಮ ಪೈಪೋಟಿ ನೀಡಿದವು. ಅರ್ಧ ಆಟ ಮುಗಿದಾಗ ಬುಲ್ಸ್ (14-15) ಕೇವಲ ಒಂದು ಅಂಕದ ಹಿನ್ನಡೆ ಅನುಭವಿಸಿತ್ತು. ಆದರೆ ದ್ವಿತೀಯಾರ್ಧದ ಮೊದಲ 10 ನಿಮಿಷದಲ್ಲಿ ಪ್ರಾಬಲ್ಯ ಪ್ರದರ್ಶನ ತೋರಿದ ಗುಜರಾತ್ ಬುಲ್ಸ್ ತಂಡವನ್ನು ಆಲೌಟ್ ಮಾಡಿ 26-20ರಲ್ಲಿ ಮುನ್ನಡೆಯನ್ನು ಹೆಚ್ಚಿಸಿಕೊಂಡಿತು.
ಕೊನೆಯ 3 ನಿಮಿಷದಲ್ಲಿ ಭರತ್ ಮತ್ತು ಪವನ್ ಅತ್ಯುತ್ತಮ ರೈಡ್ ಮಾಡಿ ಎದುರಾಳಿಯನ್ನು ಆಲೌಟ್ ಮಾಡುವ ಮೂಲಕ ಕೊನೆಯ ಒಂದುವರೆ ನಿಮಿಷದ ವೇಳೆಗೆ ಅಂಕವನ್ನು 35-35ಕ್ಕೆ ತಂದು ನಿಲ್ಲಿಸಿದರು.
ಅಂತಿಮ 45 ಸೆಕೆಂಡ್ ಇದ್ದ ವೇಳೆ ಬೆಂಗಳೂರು 36-35ರಲ್ಲಿ ಒಂದು ಅಂಕದ ಮುನ್ನಡೆಯಲ್ಲಿತ್ತು. ಆದರೆ ಜೈಂಟ್ಸ್ ತಂಡದ ಪರ್ದೀಪ್ ರೈಡಿಂಗ್ ಬಂದ ವೇಳೆ ಬುಲ್ಸ್ ಡಿಫೆಂಡರ್ಗಳು ಬೇಜಾವಬ್ದಾರಿ ಟ್ಯಾಕಲ್ಗೆ ಪ್ರಯತ್ನಿಸಿ 2 ಅಂಕ ಬಿಟ್ಟುಕೊಟ್ಟರು. ನಂತರ ರೈಡಿಂಗ್ಗೆ ಹೋದ ಭರತ್ ಕೂಡ ಔಟಾಗುವುದರೊಂದಿಗೆ ಬುಲ್ಸ್ 36-38ರಲ್ಲಿ ಹಿನ್ನಡೆ ಅನುಭವಿಸಿತು. ಕೊನೆಯ ರೈಡ್ನಲ್ಲೂ ಎದುರಾಳಿಯನ್ನು ಹಿಡಿಯುವುದು ಅನಿವಾರ್ಯವಾದ ಕಾರಣ ಬಾಕ್ಲೈನ್ನಲ್ಲಿ ಹಿಡಿಯುವ ಯತ್ನದಲ್ಲಿ ಮತ್ತೆ 2 ಅಂಕ ಬಿಟ್ಟುಕೊಟ್ಟು ಪಂದ್ಯವನ್ನು 36-40ರಲ್ಲಿ ಕಳೆದುಕೊಂಡಿತು.
7 ಅಂಕಗಳ ಹಿನ್ನಡೆಯನ್ನು ಮೆಟ್ಟಿ ನಿಂತು ಒಂದು ಅಂಕ ಮುನ್ನಡೆ ಕಂಡುಕೊಂಡರು ಕೊನೆಯ 45 ಸೆಕೆಂಡ್ನಲ್ಲಿ ಯಾಮಾರಿದ್ದರಿಂದ ಸೋಲುವ ಪಂದ್ಯವನ್ನು ಗೆದ್ದು ಮತ್ತೆ ಕೈಚೆಲ್ಲಿದಂತಾಯಿತು. ನಿನ್ನೆಯ ಪಂದ್ಯದಲ್ಲಿ ಡೆಲ್ಲಿ ವಿರುದ್ಧವೂ 10 ಅಂಕಗಳ ಮುನ್ನಡೆಯಲ್ಲಿದ್ದರೂ ಸಹಾ ಕೊನೆಯ ನಿಮಿಷಗಳಲ್ಲಿ ವೈಫಲ್ಯ ಕಂಡು ಟೈ ಮಾಡಿಕೊಂಡಿತ್ತು.
ಇದನ್ನೂ ಓದಿ:ಐಸಿಸಿ U19 ವಿಶ್ವಕಪ್ 'ಅತ್ಯಂತ ಮೌಲ್ಯಯುತ ತಂಡ'ಕ್ಕೆ ಯಶ್ ಧುಲ್ ನಾಯಕ, 3 ಭಾರತೀಯರಿಗೆ ಸ್ಥಾನ