ಹೈದರಾಬಾದ್:ಮಹಿಳಾ ವಿಶ್ವ ಓಪನ್ ರ‍್ಯಾಪಿಡ್ ಚಾಂಪಿಯನ್ ಗ್ರ್ಯಾಂಡ್ ಮಾಸ್ಟರ್ ಕೋನೇರು ಹಂಪಿ ಅವರಿಗೆ ಬಿಬಿಸಿ ಇಂಡಿಯಾ ಸ್ಪೋರ್ಟ್ಸ್ ವುಮನ್ 2020 ಪ್ರಶಸ್ತಿ ದೊರಕಿದೆ.
ಓಟಗಾರ್ತಿ ದ್ಯುತಿ ಚಂದ್, ಶೂಟರ್ ಮನು ಭಾಕರ್, ಕುಸ್ತಿಪಟು ವಿನೇಶ್ ಪೋಗಟ್, ಹಾಗೂ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಈ ಪ್ರಶಸ್ತಿ ರೇಸ್ನಲ್ಲಿದ್ದರು. ಈ ಪ್ರಶಸ್ತಿಯನ್ನು ಸಾರ್ವಜನಿಕರ ಮತಗಳನ್ನು ಆಧರಿಸಿ ಆಯ್ಕೆ ಮಾಡಲಾಗುತ್ತದೆ.
"ಒಳಾಂಗಣ ಆಟವಾಗಿರುವುದರಿಂದ, ಭಾರತದಲ್ಲಿ ಕ್ರಿಕೆಟ್ ಪಡೆಯುವಷ್ಟು ಮಹತ್ವವನ್ನು ಚೆಸ್ ಕ್ರೀಡೆ ಪಡೆದಿಲ್ಲ. ಆದರೆ ಈ ಪ್ರಶಸ್ತಿಯೊಂದಿಗೆ, ಈ ಆಟವು ಜನರ ಗಮನವನ್ನು ಸೆಳೆದಿದೆ ಎಂದು ನಾನು ಭಾವಿಸುತ್ತೇನೆ" ಎಂದು ಕೋನೇರು ಹಂಪಿ ಹೇಳಿದ್ದಾರೆ.
ಓದಿ : WTT ಸೀರಿಸ್: 2ನೇ ಸುತ್ತಿಗೆ ಪ್ರವೇಶ ಪಡೆದ ಮಾನಿಕಾ ಬಾತ್ರಾ
"ನನ್ನ ಇಚ್ಛಾಶಕ್ತಿ ಮತ್ತು ಆತ್ಮವಿಶ್ವಾಸದಿಂದಾಗಿ ನಾನು ಮಹಿಳಾ ವಿಶ್ವ ಓಪನ್ ರ‍್ಯಾಪಿಡ್ ಚಾಂಪಿಯನ್ ಗೆದ್ದಿದ್ದೇನೆ. ಮಹಿಳಾ ಆಟಗಾರನು ತನ್ನ ಆಟವನ್ನು ತ್ಯಜಿಸುವ ಬಗ್ಗೆ ಎಂದಿಗೂ ಯೋಚಿಸಬಾರದು. ಮದುವೆ ಮತ್ತು ಮಾತೃತ್ವವು ನಮ್ಮ ಜೀವನದ ಒಂದು ಭಾಗವಾಗಿದೆ. ಹಾಗಾಗಿ ನಮ್ಮ ಜೀವನದ ಹಾದಿಯನ್ನು ಬದಲಾಯಿಸಬಾರದು" ಎಂದು ಅವರು ಹೇಳಿದರು.
ಎರಡು ವರ್ಷಗಳ ಹೆರಿಗೆ ವಿರಾಮದ ನಂತರ ಹಂಪಿ 2019 ರ ಡಿಸೆಂಬರ್‌ನಲ್ಲಿ ನಡೆದ ವರ್ಲ್ಡ್ ರ‍್ಯಾಪಿಡ್ ಚೆಸ್ ಚಾಂಪಿಯನ್‌ಶಿಪ್ ಗೆದ್ದರು. ನಂತರ ಅವರು 2020 ರಲ್ಲಿ ಕೈರ್ನ್ಸ್ ಕಪ್ ಗೆದ್ದಿದ್ದರು.
ಹಂಪಿ 2002 ರಲ್ಲಿ 15 ನೇ ವಯಸ್ಸಿನಲ್ಲಿ ಕಿರಿಯ ಗ್ರ್ಯಾಂಡ್ ಮಾಸ್ಟರ್ ಆಗಿ ಹೊರಹೊಮ್ಮಿದ್ದರು. 2003 ರಲ್ಲಿ ಅರ್ಜುನ ಪ್ರಶಸ್ತಿ ಮತ್ತು 2007 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ.