ನವದೆಹಲಿ:ಲೈಂಗಿಕ ಕಿರುಕುಳದ ಆರೋಪಕ್ಕೆ ಸಂಬಂಧಿಸಿದಂತೆ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ದಿಗ್ಗಜ ಕುಸ್ತಿಪಟುಗಳನ್ನು ಕೇಂದ್ರ ಸರ್ಕಾರ ಚರ್ಚೆಗೆ ಆಹ್ವಾನಿಸಿದ್ದು, ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ ಸೇರಿದಂತೆ ಹಲವರು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರ ನಿವಾಸಕ್ಕೆ ತೆರಳಿದ್ದಾರೆ.
ಇದಕ್ಕೂ ಮೊದಲು ಕುಸ್ತಿಪಟುಗಳೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಾಗುವುದು. ಅವರ ಆರೋಪಗಳನ್ನು ಆಲಿಸಲು ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ಕ್ರೀಡಾ ಇಲಾಖೆ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದರು. ಇದರ ಬೆನ್ನಲ್ಲೇ ಕುಸ್ತಿಪಟುಗಳು ಮಾತುಕತೆಗೆ ಆಗಮಿಸಿದ್ದಾರೆ.
ಅನುರಾಗ್ ಠಾಕೂರ್ ಟ್ವೀಟ್:'ಸರ್ಕಾರವು ಕುಸ್ತಿಪಟುಗಳ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಸಿದ್ಧವಾಗಿದೆ. ಅದಕ್ಕಾಗಿ ನಾನು ಮತ್ತೊಮ್ಮೆ ಕುಸ್ತಿಪಟುಗಳನ್ನು ಚರ್ಚೆಗೆ ಆಹ್ವಾನಿಸಿದ್ದೇನೆ ಎಂದು ಅವರು ಬುಧವಾರ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ನಡುವೆ, ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಮತ್ತು ಬಜರಂಗ್ ಪೂನಿಯಾ ಪ್ರತಿಭಟನೆಯಿಂದ ವಿಮುಖರಾಗಿ ರೈಲ್ವೇ ಹುದ್ದೆ ಕರ್ತವ್ಯಕ್ಕೆ ಹಾಜರಾಗಿದ್ದರು.
ಒಲಿಂಪಿಯನ್ ಪದಕ ವಿಜೇತರಾದ ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್ ಅವರು ಡಬ್ಲ್ಯುಎಫ್‌ಐ ಮಾಜಿ ಮುಖ್ಯಸ್ಥ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿ, ಬಂಧಿಸುವಂತೆ ಒತ್ತಾಯಿಸಿ ಈ ವರ್ಷದ ಆರಂಭದಿಂದಲೂ ಪ್ರತಿಭಟನೆ ನಡೆಸುತ್ತಿದ್ದರು.
ಮೇ 28 ರಂದು, ಕುಸ್ತಿಪಟುಗಳು ಹೊಸ ಸಂಸತ್ತಿನ ಮುಂದೆ 144 ಸೆಕ್ಷನ್ ಹೇರಿದ್ದರೂ ಸಹ ಮೆರವಣಿಗೆ ಮತ್ತು ಪ್ರತಿಭಟನೆಯನ್ನು ನಡೆಸಲು ಮುಂದಾಗಿದ್ದರು. ಆದರೆ, ಇದನ್ನು ದೆಹಲಿ ಪೊಲೀಸರು ತಪ್ಪಿಸಿ, ದಾರಿ ಮಧ್ಯೆ ಬಂಧಿಸಿದ್ದರು. ಬಳಿಕ ಅವರ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 147, 149, 186, 188, 332, 353, ಪಿಡಿಪಿಪಿ ಕಾಯ್ದೆಯ ಸೆಕ್ಷನ್ 3 ರ ಅಡಿ ಎಫ್‌ಐಆರ್ ದಾಖಲಿಸಲಾಗಿತ್ತು.
ಅಲ್ಲದೇ, ಜಂತರ್ ಮಂತರ್ನಲ್ಲಿನ ಪ್ರತಿಭಟನಾ ಸ್ಥಳವನ್ನು ತೆರವುಗೊಳಿಸಲಾಗಿತ್ತು. ಇದರಿಂದ ಕುಪಿತರಾಗಿದ್ದ ಕುಸ್ತಿಪಟುಗಳು ತಾವು ಗೆದ್ದ ಪದಕಗಳನ್ನು ಗಂಗಾ ನದಿಗೆ ತರ್ಪಣ ನೀಡಲು ಹರಿದ್ವಾರಕ್ಕೆ ಆಗಮಿಸಿದ್ದರು. ರೈತ ನಾಯಕ ರಾಕೇಶ್ ಟಿಕಾಯತ್ ಅವರ ಮನವೊಲಿಕೆ ಬಳಿಕ ನಿರ್ಧಾರವನ್ನು ಬದಲಿಸಿದ್ದರು.
ಮೊದಲ ಚರ್ಚೆ ಏನಾಗಿತ್ತು:ಇದಕ್ಕೂ ಮೊದಲು ಜನವರಿಯಲ್ಲಿ ಕುಸ್ತಿಪಟುಗಳ ಜತೆ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಸಭೆ ನಡೆಸಿ, ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕ್ರಮಕ್ಕೆ ಭರವಸೆ ನೀಡಿದ್ದರು. ಇದರಿಂದ ಕುಸ್ತಿಪಟುಗಳು ತಾತ್ಕಾಲಿಕವಾಗಿ ಪ್ರತಿಭಟನೆ ಕೈಬಿಟ್ಟಿದ್ದರು. ಬಳಿಕ ಲೈಂಗಿಕ ದೌರ್ಜನ್ಯ ಆರೋಪಗಳ ತನಿಖೆಗಾಗಿ ಭಾರತ ಒಲಿಂಪಿಕ್ ಸಂಸ್ಥೆಯು (ಐಒಎ) ಮಹಿಳಾ ಬಾಕ್ಸರ್ ಎಂ.ಸಿ.ಮೇರಿಕೋಮ್, ಕುಸ್ತಿಪಟು ಯೋಗೇಶ್ವರ್ ದತ್, ಆರ್ಚರಿ ಸ್ಪರ್ಧಿ ಡೋಲಾ ಬ್ಯಾನರ್ಜಿ ಮತ್ತು ಭಾರತ ವೇಟ್‌ಲಿಫ್ಟಿಂಗ್ ಫೆಡರೇಷನ್ ಅಧ್ಯಕ್ಷ ಸಹದೇವ್ ಯಾದವ್ ಅವರಿದ್ದ ಸಮಿತಿ ರೂಪಿಸಿತ್ತು.
ದೆಹಲಿ ಪೊಲೀಸರು ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ 10 ಕೇಸ್ ಮತ್ತು ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಅದರಲ್ಲಿ ಒಂದು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ದಾಖಲಾಗಿದೆ.
ಇದನ್ನೂ ಓದಿ:ಬ್ರಿಜ್ ಭೂಷಣ್ ಮೇಲಿನ ಲೈಂಗಿಕ ಆರೋಪ ತನಿಖೆಗೆ ಸಮಿತಿ ರಚನೆ: ಸಚಿವ ಅನುರಾಗ್ ಠಾಕೂರ್ ಭರವಸೆ ಹಿನ್ನೆಲೆ ಪ್ರತಿಭಟನೆ ಕೈಬಿಟ್ಟ ಕುಸ್ತಿಪಟುಗಳು