ಭುವನೇಶ್ವರ(ಒಡಿಶಾ):ಹಾಲಿ ವಿಶ್ವಕಪ್ ಹಾಗೂ ಒಲಿಂಪಿಕ್ ಚಾಂಪಿಯನ್ ಬೆಲ್ಜಿಯಂ ಅನ್ನು ಜರ್ಮನಿ ಸೋಲಿಸುವ ಮೂಲಕ ಮೂರನೇ ಬಾರಿಗೆ ಹಾಕಿ ವಿಶ್ವಕಪ್ನ್ನು ತನ್ನ ಮುಡಿಗೇರಿಸಿಕೊಂಡಿದೆ. ಪೆನಾಲ್ಟಿ ಶೂಟೌಟ್‌ನಲ್ಲಿ ಜರ್ಮನಿ 5-4 ಗೋಲುಗಳಿಂದ ಹಾಲಿ ಚಾಂಪಿಯನ್ ಬೆಲ್ಜಿಯಂ ಅನ್ನು ಸೋಲಿಸಿತು. ಪಂದ್ಯದ ನಿಗದಿತ ಸಮಯದಲ್ಲಿ ಎರಡು ತಂಡಗಳು 3-3 ರಿಂದ ಸಮಬಲ ಸಾಧಿಸಿತ್ತು. ಪೆನಾಲ್ಟಿ ಶೂಟೌಟ್‌ನಲ್ಲಿ ಒಂದು ಗೋಲ್ನ ಮುನ್ನಡೆ ಪಡೆದ ಜರ್ಮನಿ ಮೂರನೇ ಬಾರಿ ಕಪ್ ಗೆದ್ದು ಸಂಭ್ರಮಿಸಿದೆ.
ಭಾನುವಾರ ಭುವನೇಶ್ವರದಲ್ಲಿ ನಡೆದ ಶೂಟೌಟ್‌ನಲ್ಲಿ ಹಾಲಿ ಚಾಂಪಿಯನ್ ಬೆಲ್ಜಿಯಂ ತಂಡವನ್ನು 5-4 ಗೋಲುಗಳಿಂದ ಸೋಲಿಸಿದ ಜರ್ಮನಿ ತನ್ನ ಮೂರನೇ ಪುರುಷರ ಹಾಕಿ ವಿಶ್ವಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ವಿರಾಮದ ವೇಳೆಗೆ 0-2 ಹಿನ್ನಡೆಯಲ್ಲಿದ್ದ ಜರ್ಮನಿ ದ್ವಿತೀಯಾರ್ಧದಲ್ಲಿ ಮೂರು ಗೋಲು ಗಳಿಸಿ 3-2 ಮುನ್ನಡೆ ಸಾಧಿಸಿತು. ಆದಾಗ್ಯೂ, ಬೆಲ್ಜಿಯಂ ಪೆನಾಲ್ಟಿ ಕಾರ್ನರ್‌ನಿಂದ ಸಾಮಾನ್ಯ ಸಮಯದ ಸಮಬಲ ಸಾಧಿಸಿತು. ಪೆನಾಲ್ಟಿ ಶೂಟೌಟ್‌ನಲ್ಲಿ ಜರ್ಮನಿ 5-4 ಗೋಲುಗಳಿಂದ ಮೇಲುಗೈ ಸಾಧಿಸಿತು.
ನಿಗದಿತ ಸಮಯದಲ್ಲಿ ಜರ್ಮನಿ ಪರ ನಿಕ್ಲಾಸ್ ವೆಲೆನ್ (29ನೇ), ಗೊನ್ಜಾಲೊ ಪೆಯ್ಲಾಟ್ (41ನೇ ನಿ) ಮತ್ತು ನಾಯಕ ಮ್ಯಾಟ್ಸ್ ಗ್ರಾಮ್‌ಬುಷ್ (48ನೇ ನಿ) ಗೋಲು ದಾಖಲಿಸಿದರೆ, ಫ್ಲೋರೆಂಟ್ ವ್ಯಾನ್ ಆಬೆಲ್ ಫ್ಲೋರೆಂಟ್ (10ನೇ), ಟ್ಯಾಂಗುಯ್ ಕೊಸಿನ್ಸ್ (11ನೇ) ಮತ್ತು ಟಾಮ್ ಬೂನ್ (59ನೇ) ಬೆಲ್ಜಿಯಂಗೆ ಗೋಲ್ ಗಳಿಸಿದರು.
ಮೊದಲಾರ್ಧ ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿಗೆ ಸಾಕ್ಷಿಯಾಯಿತು. ಐದನೇ ನಿಮಿಷದಲ್ಲಿ ಜರ್ಮನಿಯು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಪಡೆದರೂ ಬೆಲ್ಜಿಯಂ ಡಿಫೆಂಡರ್‌ಗಳು ಆ ಅವಕಾಶಗಳನ್ನು ವಿಫಲಗೊಳಿಸಿದರು. ಬೆಲ್ಜಿಯಂ ತಕ್ಷಣವೇ ಪ್ರತೀಕಾರ ತೀರಿಸಿಕೊಂಡಿತು ಮತ್ತು ವಾನ್ ಆಬೆಲ್ ಫ್ಲೋರೆಂಟ್ ಒಂಬತ್ತನೇ ನಿಮಿಷದಲ್ಲಿ ಅದ್ಭುತ ಫೀಲ್ಡ್ ಗೋಲ್ ಮೂಲಕ ರೆಡ್ ಲಯನ್ಸ್ ಖಾತೆಯನ್ನು ತೆರೆದರು. ಮೊದಲ ಕ್ವಾರ್ಟರ್‌ನ ಕೊನೆಯ ಭಾಗದಲ್ಲಿ ಜರ್ಮನಿ ಪುಟಿದೇಳಲು ಪ್ರಯತ್ನಿಸಿತಾದರೂ ಬೆಲ್ಜಿಯಂ 2-0 ಅಂತರದಲ್ಲಿ ಕೊನೆಗೊಂಡಿತು.
ಎರಡನೇ ಕ್ವಾರ್ಟರ್‌ನಲ್ಲಿಯೂ, ಬೆಲ್ಜಿಯಂ ತನ್ನ ಅಧಿಕಾರವನ್ನು ಅಧಿಪತ್ಯವನ್ನು ಮುಂದುವೆರೆಸಿತು. ಜರ್ಮನಿಗೆ 15 ನೇ ನಿಮಿಷದಲ್ಲಿ ಮೊದಲ ಪೆನಾಲ್ಟಿ ಕಾರ್ನರ್ ಸಿಕ್ಕಿತಾದರೂ ಗೋಲ್ ಆಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. 28ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಾರ್ನರ್‌ಅನ್ನು ಜರ್ಮನಿಯ ನಿಕ್ಲಾಸ್ ವೆಲೆನ್ ಗೋಲಾಗಿ ಪರಿವರ್ತಿಸಿ ತಂಡಕ್ಕೆ ಮೊದಲ ಅಂಕ ಗಳಿಸಿದರು. ಮೊದಲಾರ್ಧಕ್ಕೆ 1-2 ರಿಂದ ಜರ್ಮನಿ ಹಿನ್ನಡೆ ಅನುಭವಿಸಿತ್ತು.