ಅಲ್ಖೋರ್(ಕತಾರ್): ನಾಲ್ಕು ಬಾರಿ ಫಿಫಾ ವಿಶ್ವಕಪ್ಗೆ ಮುತ್ತಿಕ್ಕಿದ ಜರ್ಮನಿ ತಂಡ ಈ ಬಾರಿ 16ರ ಘಟ್ಟ ತಲುಪುವಲ್ಲಿ ವಿಫಲವಾಗಿದೆ. ಕೋಸ್ಟರಿಕಾವನ್ನು 4-2 ಗೋಲುಗಳ ಅಂತರದಲ್ಲಿ ಸೋಲಿಸಿತಾದರೂ ಮುಂದಿನ ಸುತ್ತಿನ ಪ್ರವೇಶ ಪಡೆಯಲು ಸಾಧ್ಯವಾಗಲಿಲ್ಲ. ಈ ಗುಂಪಿನಿಂದ ಜರ್ಮನಿ ಕೋಸ್ಟರಿಕಾ ಎರಡೂ ಹೊರಬಿದ್ದಿವೆ.
ಜರ್ಮನಿ ಮತ್ತು ಕೋಸ್ಟರಿಕಾ ಈ ಗುಂಪಿನಲ್ಲಿ ಕ್ರಮವಾಗಿ ಮೂರು, ನಾಲ್ಕನೇ ಸ್ಥಾನಗಳಿಸಿವೆ. 2018 ರ ನಂತರ ಜರ್ಮನಿ ಸತತ ಎರಡನೇ ಬಾರಿಗೆ ಗುಂಪು ಹಂತದಿಂದಲೇ ಹೊರಗುಳಿದಿದ್ದು ಗಮನಾರ್ಹ. ನಿನ್ನೆ ನಡೆದ ಪಂದ್ಯದಲ್ಲಿ ಜರ್ಮನಿ ಪರ ಗ್ನಾಬ್ರಿ (10ನೇ ನಿಮಿಷ), ಕೈ ಹಾವರ್ಟ್ಜ್ (73 ಮತ್ತು 85ನೇ), ಫುಲ್‌ಕ್ರುಗ್ (89ನೇ) ಗೋಲು ದಾಖಲಿಸಿದರು. ಕೋಸ್ಟರಿಕಾ ಪರ ತೇಜೆಡಾ (58ನೇ ನಿ) ಮತ್ತು ಜುವಾನ್ (70ನೇ ನಿ) ಗೋಲು ಗಳಿಸಿದರು.
ಸೆರ್ಜ್ ಗ್ನಾಬ್ರಿ 10ನೇ ನಿಮಿಷದ ಹೆಡರ್ ಮೂಲಕ ಜರ್ಮನಿಗೆ ಮೊದಲ ಗೋಲ್ ತಂದಿಟ್ಟರು. ಮೊದಲಾರ್ಧ ಒಂದೇ ಗೋಲ್ನಲ್ಲಿ ಮುಗಿಯಿತು. ಕೋಸ್ಟರಿಕಾ ಗೋಲುಗಳಿಸಲು ಹವಣಿಸಿದರೂ ಅವಕಾಶ ವಂಚಿತವಾಯಿತು. ದ್ವಿತೀಯಾರ್ಧದಲ್ಲಿ ಜರ್ಮನಿ ಸೇರಿಕೊಂಡ ಬದಲಿ ಆಟಗಾರ ಕೈ ಹಾವರ್ಟ್ಜ್ ಮಾಡಿದ ಮೋಡಿ ಪಂದ್ಯದ ದಿಕ್ಕು ಬದಲಿಸಿತು.
58ನೇ ನಿಮಿಷದಲ್ಲಿ ಕೋಸ್ಟರಿಕಾದ ಯೆಲ್ಟ್ಸಿನ್ ತೇಜೆಡಾ ಗೋಲ್ಗಳಿಸಿ ಸ್ಕೋರ್ ಸಮಗೊಳಿಸಿದರು. ಜುವಾನ್ ವರ್ಗಾಸ್ 70ನೇ ನಿಮಿಷದಲ್ಲಿ ಮತ್ತೊಂದು ಗೋಲ್ ಪಡೆದು ಕೋಸ್ಟರಿಕಾವನ್ನು 2-1 ರಿಂದ ಮುನ್ನಡೆಸಿದರು. ಜರ್ಮನಿಯ ಬದಲಿ ಆಟಗಾರ ಕೋಸ್ಟರಿಕಾ ಮುನ್ನಡೆ ಸಾಧಿಸಿದ ಮೂರು ನಿಮಿಷದ ಅಂತರದಲ್ಲಿ ಮತ್ತೊಂದು ಗೋಲ್ ದಾಖಲಿಸಿ ಸಮಬಲ ಸಾಧಿಸಿದರು. ನಂತರದ 12(89ನೇ) ನಿಮಿಷದಲ್ಲಿ ಮತ್ತೆ ಗೋಲ್ ತಂದು ಜರ್ಮನಿಗೆ ಒಂದು ಅಂಕ ಹೆಚ್ಚಿಸಿದರು. ಇನ್ನೊಬ್ಬ ಬದಲಿ ಆಟಗಾರ ನಿಕ್ಲಾಸ್ ಫುಲ್‌ಕ್ರುಗ್ ನಾಲ್ಕನೆಯ ಬಾರಿ ಚೆಂಡಿಗೆ ಗೋಲ್ ಪೋಸ್ಟ್ ಸೇರಿಸಿದರು.
ಇದನ್ನೂ ಓದಿ:ಸೌದಿ ಅರೇಬಿಯಾ ವಿರುದ್ಧ ಮೆಕ್ಸಿಕೊ ಗೆಲುವು; ಆದರೂ ನಾಕೌಟ್ ಭಾಗ್ಯವಿಲ್ಲ