ಗುವಾಹಟಿ (ಅಸ್ಸೋಂ):ಅಸ್ಸೋಂ ಕುಸ್ತಿ ಅಸೋಸಿಯೇಷನ್ ಸಲ್ಲಿಸಿದ ಅರ್ಜಿಯ ಮೇರೆಗೆ ಜುಲೈ 11 ರಂದು ನಿಗದಿಯಾಗಿದ್ದ ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಚುನಾವಣೆಗೆ ಗುವಾಹಟಿ ಹೈಕೋರ್ಟ್ ತಡೆ ನೀಡಿದೆ.
ಅಸ್ಸೋಂ ರೆಸ್ಲಿಂಗ್ ಅಸೋಸಿಯೇಷನ್, ವ್ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ, IOA ad-hoc ಸಂಸ್ಥೆ ಮತ್ತು ಕ್ರೀಡಾ ಸಚಿವಾಲಯದ ವಿರುದ್ಧ ಅರ್ಜಿ ಸಲ್ಲಿಸಿತ್ತು. ಅರ್ಜಿಯಲ್ಲಿ ನವೆಂಬರ್ 15, 2014 ರಂದು ಗೊಂಡಾದಲ್ಲಿ ಡಬ್ಲ್ಯುಎಫ್‌ಐನ ಜನರಲ್ ಕೌನ್ಸಿಲ್ ಸಭೆಯಲ್ಲಿ ಡಬ್ಲ್ಯುಎಫ್‌ಐನ ಅಂಗಸಂಸ್ಥೆ ಸದಸ್ಯನಾಗಲು ಅರ್ಹತೆಯನ್ನು ಅಸ್ಸೋಂ ರೆಸ್ಲಿಂಗ್ ಅಸೋಸಿಯೇಷನ್ಗೆ ನೀಡುವ ಬಗ್ಗೆ ಹೇಳಲಾಗಿತ್ತು. ಆದರೆ ಅಸ್ಸೋಂ ರೆಸ್ಲಿಂಗ್ ಅಸೋಸಿಯೇಷನ್ ಅನ್ನು ಅಂಗ ಸಂಸ್ಥೆಯಾಗಿ ಪರಿಗಣಿಸಿಲ್ಲ ಎಂದು ಹೇಳಿದೆ.
ಅಲ್ಲದೇ ವಾದದಲ್ಲಿ, ಸಂಸ್ಥೆಯು ಡಬ್ಲ್ಯುಎಫ್‌ಐಗೆ ಸಂಯೋಜಿತವಾಗಿಲ್ಲದಿದ್ದರೆ ಮತ್ತು ಅವರು ತಮ್ಮ ಪ್ರತಿನಿಧಿಯನ್ನು ಚುನಾವಣಾ ಕಾಲೇಜಿಗೆ ನಾಮನಿರ್ದೇಶನ ಮಾಡದಿದ್ದರೆ, ಚುನಾವಣಾ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು ಎಂದು ಹೇಳಿದೆ. ತಾತ್ಕಾಲಿಕ ಸಮಿತಿಯು ಚುನಾವಣಾ ಕಾಲೇಜು ಜೂನ್ 25ರ ವರೆಗೆ ಹುದ್ದೆಗಳಿಗೆ ಅರ್ಜಿ ಸ್ವೀಕರಿಸುವ ಬಗ್ಗೆ ಅಧಿಸೂಚನೆ ಹೊರಡಿಸಿದೆ. ಅಲ್ಲದೇ ಜುಲೈ 11 ರಂದು ಚುನಾವಣೆ ನಡೆಯಲಿದೆ ಎಂದು ತಿಳಿಸಿತ್ತು.
ನ್ಯಾಯಾಲಯವು ಪ್ರತಿವಾದಿಗಳಾದ ಡಬ್ಲ್ಯುಎಫ್‌ಐ, IOA ad-hoc ಸಂಸ್ಥೆ ಮತ್ತು ಕ್ರೀಡಾ ಸಚಿವಾಲಯಕ್ಕೆ ಮುಂದಿನ ವಿಚಾರಣಾ ದಿನಾಂಕ ನಿಗದಿಪಡಿಸುವವರೆಗೆ ಡಬ್ಲ್ಯುಎಫ್‌ಐನ ಕಾರ್ಯಕಾರಿ ಸಮಿತಿಯ ಚುನಾವಣೆಯನ್ನು ಮುಂದುವರಿಸಬಾರದು ಎಂದು ನಿರ್ದೇಶಿಸಿದೆ. ನ್ಯಾಯಾಲಯವು ಜುಲೈ 17 ರಂದು ವಿಚಾರಣೆಗೆ ಮುಂದಿನ ದಿನಾಂಕವನ್ನು ನಿಗದಿಪಡಿಸಿದೆ.
ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್‌ಐ)ದ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಜನವರಿಯಲ್ಲಿ ಕುಸ್ತಿ ಪಟುಗಳು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳದ ಆರೋಪವನ್ನು ಕುಸ್ತಿ ಪಟುಗಳು ಮಾಡಿದ ನಂತರ ಅವರು ಅಧ್ಯಕ್ಷ ಸ್ಥಾನದಿಂದ ಇಳಿದಿದ್ದರು.
ಆರೋಪ ಸಂಬಂಧ ಕ್ರೀಡಾ ಸಚಿವಾಲಯ ಪಿಟಿ ಉಷಾ ಅವರ ನೇತೃತ್ವದಲ್ಲಿ ಸಮಿತಿಯನ್ನು ತನಿಖೆಗಾಗಿ ರಚಿಸಿತ್ತು. ಅದರಂತೆ ಸಮಿತಿ ತನಿಖೆ ನಡೆಸಿ ವರದಿಯನ್ನೂ ಸಲ್ಲಿಸಿತ್ತು. ಆದರೆ ಇದರ ಬಗ್ಗೆ ಮಹಿಳಾ ಕುಸ್ತಿ ಪಟುಗಳು ಆಕ್ಷೇಪ ವ್ಯಕ್ತ ಪಡಿಸಿದ್ದಲ್ಲದೇ, ಪೊಲೀಸ್ ಠಾಣೆಯಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದೂರು ದಾಖಲಿಸಿದ್ದರು. ಆದರೆ ಪೊಲೀಸರು ದೂರು ಸ್ವಿಕರಿಸಿಲ್ಲ ಎಂದು ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಿದ್ದರು.
ಸುಪ್ರೀಂ ಕೋರ್ಟ್ ಆದೇಶದಂತೆ ಶರಣ್ ಸಿಂಗ್ ವಿರುದ್ಧ ದೂರು ದಾಖಲಾಯಿತು. ಆದರೆ ಅವರನ್ನು ಬಂಧಿಸ ಬೇಕು ಎಂದು ಒತ್ತಾಯಿಸಿ ಕುಸ್ತಿ ಪಟುಗಳು ದೆಹಲಿಯ ಜಂತರ್ ಮಂತರ್ನಲ್ಲಿ ಹೋರಾಟವನ್ನು ನಡೆಸಿದರು. ಆದರೆ ಶರಣ್ ಸಿಂಗ್ ಅವರನ್ನು ಪೊಲೀಸರು ಬಂಧಿಸಿಲ್ಲ.
ಇತ್ತೀಚೆಗೆ ಕುಸ್ತಿ ಪಟುಗಳ ಜೊತೆ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಚರ್ಚೆ ನಡೆಸಿ ಜೂನ್ 15 ರಂದು ಕೋರ್ಟ್ನಲ್ಲಿ ಆರೋಪ ಪಟ್ಟಿ ಸಲ್ಲಿಕೆ ಮಾಡುವ ಬಗ್ಗೆ ಭರವಸೆ ನೀಡಿದ್ದರು. ಅದರಂತೆ ದೆಹಲಿ ಪೊಲೀಸರು ಆರೋಪಿತರು ತಿಳಿಸಿದ ದೇಶಗಳಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿ ಕೋರ್ಟ್ಗೆ ಸಲ್ಲಿಸಿದ್ದಾರೆ. ಆದರೆ ಆರೋಪ ಪಟ್ಟಿಯಲ್ಲಿ ಸಿಂಗ್ ಅಪರಾಧ ಎಸಗಿರುವ ಬಗ್ಗೆ ಯಾವುದೇ ದಾಖಲೆಗಳಿಲ್ಲ ಎನ್ನಲಾಗಿದೆ.
ಇದನ್ನೂ ಓದಿ:Wrestlers Protest: "ಬ್ರಿಜ್ ಭೂಷಣ್ ವಿರುದ್ಧ ನಮ್ಮ ಹೋರಾಟ, ಸರ್ಕಾರದ ವಿರುದ್ಧ ಅಲ್ಲ"-ಸಾಕ್ಷಿ ಮಲಿಕ್ ದಂಪತಿ