ಪ್ಯಾರೀಸ್:ಆಕಸ್ಮಿಕವಾಗಿ ಬಾಲ್ ಗರ್ಲ್ಗೆ ಚೆಂಡು ಹೊಡೆದಿದ್ದರಿಂದ ಜಪಾನ್ನ ಡಬಲ್ಸ್ ಆಟಗಾರ್ತಿ ಮಿಯು ಕಾಟೊ ಮತ್ತು ಆಕೆಯ ಜೊತೆಗಾತಿ ಇಂಡೋನೇಷ್ಯಾದ ಅಲ್ಡಿಲಾ ಸುಟ್ಜಿಯಾಡಿ ಅವರನ್ನು ಫ್ರೆಂಚ್ ಓಪನ್ನಿಂದ ಅನರ್ಹಗೊಳಿಸಲಾಗಿದೆ. ಟೆನಿಸ್ ನಿಯಮಗಳ ಅನ್ವಯ ಕ್ರಮ ಕೈಗೊಳ್ಳಲಾಗಿದೆ.
ಭಾನುವಾರ ರೋಲ್ಯಾಂಡ್ ಗ್ಯಾರೋಸ್ನ 14ನೇ ಕೋರ್ಟ್ನಲ್ಲಿ ಪಂದ್ಯ ನಡೆಯುತ್ತಿದ್ದಾಗ ಘಟನೆ ಸಂಭವಿಸಿತು. ಜೆಕ್ ಗಣರಾಜ್ಯದ ಮೇರಿ ಬೌಜ್ಕೋವಾ, ಸ್ಪೇನ್‌ನ ಸಾರಾ ಸೊರಿಬ್ಸ್ ಟೊರ್ಮೊ ಮತ್ತು ಮಿಯು ಕಾಟೊ, ಅಲ್ಡಿಲಾ ಸುಟ್ಜಿಯಾಡಿ ಜೋಡಿ ಅಂಕಣದಲ್ಲಿ ಸೆಣಸಾಡುತ್ತಿದ್ದರು. ಮೊದಲ ಸೆಟ್ 7-6 ರಲ್ಲಿ ಕೊನೆಗೊಂಡು ಒಂದು ಸೆಟ್ ಹಿನ್ನಡೆ ಅನುಭವಿಸಿದ್ದರು. 2 ನೇ ಸೆಟ್ನಲ್ಲಿ ಮಿಯು ಕಾಟೊ, ಅಲ್ಡಿಲಾ ಸುಟ್ಜಿಯಾಡಿ ಜೋಡಿ ತಿರುಗೇಟು ನೀಡಿದರು. 3-1 ರಲ್ಲಿ ಸಾಗುತ್ತಿದ್ದರು.
ಈ ವೇಳೆ ಬಾಲ್ ಗರ್ಲ್ ಅಂಕಣದಲ್ಲಿ ಬಂದಿರುವುದನ್ನು ನೋಡದೇ ಜಪಾನ್ನ ಮಿಯು ಕಾಟೊ ಚೆಂಡನ್ನು ಇನ್ನೊಂದು ತುದಿಗೆ ಹೊಡೆದರು. ಚೆಂಡು ಅಲ್ಲಿದ್ದ ಬಾಲ್ ಗರ್ಲ್ ಕುತ್ತಿಗೆಗೆ ಬಲವಾಗಿ ಬಡಿಯಿತು. ನೋವಿನಿಂದ ಬಾಲ್ ಗರ್ಲ್ ಅಳಲು ಆರಂಭಿಸಿದಳು. ತಕ್ಷಣವೇ ಅಲ್ಲಿಗೆ ಹೋದ ಮಿಯು ಕಾಟೊ ಆಕೆಯ ಬಳಿ ಕ್ಷಮೆ ಕೋರಿದರು. ಬಳಿಕ ಚೇರ್ ಅಂಪೈರ್ ಅಲೆಕ್ಸಾಂಡ್ರೆ ಜು ಅವರು ಮಿಯು ಕಾಟೊ ಜೋಡಿಗೆ ಎಚ್ಚರಿಕೆ ನೀಡಿದರು.
ಅಚಾನಕ್ಕಾಗಿ ಚೆಂಡು ಬಡಿದಿದ್ದರಿಂದ ಬಾಲ್ ಗರ್ಲ್ 15 ನಿಮಿಷ ಅಳುತ್ತಿದ್ದಳು. ಇದರಿಂದ ಪ್ರೇಕ್ಷಕರು ಕೂಡಾ ಕೂಗಲು ಆರಂಭಿಸಿದ್ದಾರೆ. ಅಂಕಣಕ್ಕೆ ಬಂದ ರೆಫ್ರಿ ರೆಮಿ ಅಜೆಮಾರ್ ಮತ್ತು ಗ್ರ್ಯಾಂಡ್ ಸ್ಲಾಮ್ ಮೇಲ್ವಿಚಾರಕ ವೇಯ್ನ್ ಮೆಕ್ವೆನ್ ಆಟಗಾರ್ತಿಯರನ್ನು ವಿಚಾರಣೆ ನಡೆಸಿದರು. ಅವರಿಂದ ಸ್ಪಷ್ಟನೆ ಪಡೆದ ಬಳಿಕ ಆಟ ನಿಲ್ಲಿಸಿ ಇಬ್ಬರನ್ನೂ ಟೂರ್ನಿಯಿಂದ ಅನರ್ಹಗೊಳಿಸಿ, ಮೇರಿ ಬೌಜ್ಕೋವಾ, ಸಾರಾ ಸೊರಿಬ್ಸ್ ಟೊರ್ಮೊ ಜೋಡಿಯನ್ನು ಪಂದ್ಯದ ವಿಜೇತರನ್ನಾಗಿ ಘೋಷಿಸಲಾಯಿತು.